ಸಂಜಯ್ ದತ್ ಜೈಲು ಅವಧಿ: 'ಮಹಾ' ಸರ್ಕಾರ ಅಭಿಪ್ರಾಯ ಕೇಳಿದ ಕೇಂದ್ರ
ನವದೆಹಲಿ: 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಹಾಗೂ ಬಾಲಿವುಡ್ ನಟ ಸಂಜಯ್ ದತ್ ಅವರ ಜೈಲು ಅವಧಿಯನ್ನು ಕಡಿತಗೊಳಿಸುವ ಸಂಬಂಧ ಮಹಾರಾಷ್ಟ್ರದ ಅಭ್ರಿಪ್ರಾಯವನ್ನು ಕೇಂದ್ರ ಗೃಹ ಇಲಾಖೆ ಬುಧವಾರ ಕೇಳಿದೆ.
42 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಜಯ್, ಪೆರೋಲ್ ಮೇಲೆ ಹೊರ ಬಂದಿದ್ದಾರೆ.
ಮಾದ್ಯಮಗಳ ವರದಿ ಪ್ರಕಾರ, ನ್ಯಾಯಾಮೂರ್ತಿ ಮಾರ್ಕಂಡೇಯಾ ಕಟ್ಜು ಅವರು ಸಂಜಯ್ ದತ್ ಅವರ ಜೈಲು ಅವಧಿಯನ್ನು ಕಡಿತಗೊಳಿಸುವಂತೆ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆ ಮಹಾರಾಷ್ಟ್ರದ ಸರ್ಕಾರಕ್ಕೆ ತಮ್ಮ ಅಭಿಪ್ರಾಯ ತಿಳಿಸುವಂತೆ ಪತ್ರ ರವಾನಿಸಿದ್ದಾರೆ.
53 ವರ್ಷದ ಸಂಜಯ್ ದತ್ ಅಕ್ಟೋಬರ್ 1ರಂದು ಯರವಾಡ ಜೈಲಿನಿಂದ ಪೆರೋಲ್ ಮೇಲೆ ಹೊರ ಬಂದಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ ಅವರ ಪೆರೋಲ್ ಅವಧಿಯನ್ನು 14 ದಿನ ವಿಸ್ತರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದರು.
1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟದಲ್ಲಿ ದೋಷಿ ಎಂದು ಹೇಳಿದ ಸುಪ್ರೀಂ ಕೋರ್ಟ್ ದತ್‌ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 20 ವರ್ಷಗಳ ಹಿಂದೆ ದತ್ 18 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರಿಂದ, ಬಾಕಿ ಉಳಿದ 42 ತಿಂಗಳುಗಳ ಶಿಕ್ಷೆಯನ್ನು ಇದೀಗ ಅನುಭವಸಬೇಕಾಗಿದೆ.