'ಮುಂಬೈ ದಾಳಿ' ವಿಚಾರಣೆ ಇನ್ನು ಯಾಕೆ ಆರಂಭಿಸಿಲ್ಲ: ಪಾಕ್ ಗೆ ಒಬಾಮ ಪ್ರಶ್ನೆ
ಭಾರತ-ಪಾಕಿಸ್ತಾನ ಎರಡು ದೇಶಗಳ ನಡುವೆ ಉತ್ತಮ ಸೌಹಾರ್ದ, ಸಂಬಂಧ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ..
ವಾಷಿಂಗ್ಟನ್: ಭಾರತ-ಪಾಕಿಸ್ತಾನ ಎರಡು ದೇಶಗಳ ನಡುವೆ ಉತ್ತಮ ಸೌಹಾರ್ದ, ಸಂಬಂಧ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕಕ್ಕೆ ಭೇಟಿ ನೀಡಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ 'ಮುಂಬೈ ದಾಳಿ' ವಿಚಾರಣೆ ಇನ್ನು ಯಾಕೆ ಆರಂಭಿಸಿಲ್ಲ ಎಂದು ದೊಡ್ಡಣ್ಣ ಪ್ರಶ್ನಿಸಿದ್ದಾನೆ.
ಅಮೆರಿಕ ಪ್ರವಾಸದಲ್ಲಿರುವ ಷರೀಫ್ ಬುಧವಾರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಭೇಟಿ ಮಾಡಿ, ದ್ರೋನ್ ದಾಳಿ, ಅಫ್ಘಾನಿಸ್ತಾನ ಹಾಗೂ ಕಾಶ್ಮೀರ ವಿವಾದ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಮುಂಬೈ ದಾಳಿ ಹಾಗೂ ಜಮಾತ್-ಉದ್-ದಾವಾ ಬಗ್ಗೆಯೂ ಪ್ರಸ್ತಾಪವಾಯಿತು.
ಮುಂಬೈ ದಾಳಿಯ ವಿಚಾರಣೆ ಯಾವ ಹಂತದಲ್ಲಿದೆ ಎಂದು ಒಬಾಮ ಅವರು ಪ್ರಶ್ನಿಸಿದರು. ಅಲ್ಲದೆ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉದ್ ದಾವಾ ಬಗ್ಗೆಯೂ ಪ್ರಸ್ತಾಪ ಮಾಡಿದರು ಎಂದು ಷರೀಫ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತದ ಮುಂಬೈ ದಾಳಿಯ ವಿಚಾರಣೆ ಇನ್ನು ಯಾಕೆ ಆರಂಭಿಸಿಲ್ಲ ಎಂದು ಒಬಾಮ ಅವರು ಪ್ರಶ್ನಿಸಿದರು ಎಂದು, ಅಮೆರಿಕ ಅಧ್ಯಕ್ಷರೊಂದಿಗೆ ಎರಡು ಗಂಟೆಗಳ ಕಾಲ ವೈಟ್ ಹೌಸ್ ನಲ್ಲಿ ನಡೆದ ಸಭೆಯ ಬಳಿಕ ಷರೀಫ್ ಹೇಳಿದ್ದಾರೆ.
ಸಭೆಯಲ್ಲಿ ದ್ರೋನ್ ದಾಳಿಯ ಬಗ್ಗೆ ನಾನು ಪ್ರಸ್ತಾಪಿಸಿದೆ. ಇಂತಹ ದಾಳಿಗಳು ನಿಲ್ಲಬೇಕು ಎಂದು ಷರೀಫ್ ತಿಳಿಸಿದರು.