ಕಲ್ಲಿದ್ದಲು ಹಗರಣ: ಅಸೋಚಾಮ್ನಿಂದ ಪಿಎಂಗೆ ಬಹಿರಂಗ ಪತ್ರ
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಮತ್ತು ವಾಣಿಜ್ಯ ವೇದಿಕೆಗಳ ಸಂಘ(ಅಸೋಚಾಮ್) ಪ್ರಧಾನಿ...
ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಮತ್ತು ವಾಣಿಜ್ಯ ವೇದಿಕೆಗಳ ಸಂಘ(ಅಸೋಚಾಮ್) ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶುಕ್ರವಾರ ಬಹಿರಂಗ ಪತ್ರ ಬರೆದಿದೆ.
ಕಲ್ಲಿದ್ದಲು ಹಗರಣದಲ್ಲಿ ಉದ್ಯಮಿಗಳ ಹೆಸರು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಅಸೋಚಾಮ್ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಅರ್ಧಸತ್ಯದ ಚಿಂತೆಯಾಗಿದೆ ಎಂದು ತಿಳಿಸಿದೆ.
ಇತ್ತೀಚೆಗಷ್ಟೇ ಕೇಂದ್ರ ತನಿಖಾ ತಂಡ(ಸಿಬಿಐ) ಆದಿತ್ಯಾ ಬಿರ್ಲಾಗ್ರೂಪ್ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಿತ್ತು.
ಈ ಹಿನ್ನಲೆಯಲ್ಲಿ ಇಂದು ಅಸೋಚಾಮ್ ಪ್ರಧಾನಿಯವರಿಗೆ ಬಹಿರಂಗ ಪತ್ರ ಬರೆದಿದ್ದು, ಅರ್ಧ ಸತ್ಯ ಪ್ರಕರಣಗಳಿಂದಾಗಿ ಕೈಗಾರಿಕೋದ್ಯಮಿಗಳ ಮೇಲೆ ಅಪನಂಬಿಕೆ ಹೆಚ್ಚಾಗಿ, ಅವಿಶ್ವಾಸದ ಪರಿಸರ ಉಂಟಾಗಿದೆ ಎಂದು ತಿಳಿಸಿದೆ.
ಗಾಳಿಸುದ್ದಿಯಿಂದ ಕೈಗಾಕಾರಿಕೋದ್ಯಮಿಗಳನ್ನು ಜನರು ನಂಬುತ್ತಿಲ್ಲ. ಅರೆಬೆಂದ ಪ್ರಕರಣಗಳು ಕೈಗಾರಿಕೋದ್ಯಮದ ನಾಯಕರ ಹೆಸರನ್ನು ಎಳೆಯುತ್ತಿದ್ದು, ಇದರಿಂದ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಇಂತಹ ಸನ್ನಿವೇಶಗಳನ್ನು ನಾವೇ ಸ್ವತಃ ಎದುರಿಸಿದ್ದೇವೆ ಎಂದು ಪತ್ರದಲ್ಲಿ ಹೇಳಿದೆ.
ಯಾವುದೇ ದೃಢವಾದ ಆಧಾರವಿಲ್ಲದಿದ್ದರು, ಉದ್ಯಮಿಗಳ ಹೆಸರು ಪ್ರಕರಣದಲ್ಲಿ ಕೇಳಿಬರುತ್ತಿದ್ದು, ಸಿಬಿಐ ತನಿಖೆಗೆ ಹೆಚ್ಚಿನ ಉದ್ಯಮಿಗಳು ಒಳಪಡುವ ಸಾಧ್ಯತೆ ಇರುವುದರ ಬಗ್ಗೆ ಭಯವಿದೆ. ಇದಲ್ಲದೇ ಇಂತಹ ಪ್ರಕರಣಗಳಿಂದಾಗಿ ವಿನಾ ಕಾರಣ ಕೈಗಾರಿಕೋದ್ಯಮಿಗಳನ್ನು ಅವಿಸ್ವಾಸಿಗಳನ್ನಾಗಿ ಕಾಣತ್ತಿರುವುದು ಅಘಾತವನ್ನುಂಟಮಾಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅವಿಶ್ವಾಸದ ಪರಿಸರ ಮೂಡಿದ್ದು, ಉದ್ಯಮದಲ್ಲಿ ನಷ್ಟ ಉಂಟಾಗಿದೆ. ಹೂಡಿಕೆದಾರರ ಮತ್ತು ಗ್ರಾಹಕರ ಆತ್ಮ ವಿಶ್ವಾಸ ಕುಗ್ಗಿದೆ ಎಂದು ಅಸೋಚಾಮ್ ಹೇಳಿದೆ.
ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಮತ್ತು ಕಲ್ಲಿದ್ದಲು ಇಲಾಖೆಯ ನಿವೃತ್ತ ಕಾರ್ಯದರ್ಶಿ ಪಿ.ಸಿ ಪಾರಖ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು.