ಪ್ರಧಾನಿ ರಾಜಿನಾಮೆಗೆ ಬಿಜೆಪಿ ಆಗ್ರಹ
ಪಾಟ್ನಾ: ಕಲ್ಲಿದ್ದಲು ತನಿಖೆಗೆ ಒಳಪಡುವ ಮುನ್ನ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಶುಕ್ರವಾರ ಆಗ್ರಹಿಸಿದೆ.
ಕಲ್ಲಿದ್ದಲು ಹಗರಣದಲ್ಲಿ ಮನಮೋಹನ್ ಸಿಂಗ್ ಅವರ ಹೆಸರು ಕೇಳಿಬಂದಿರುವ ಹಿನ್ನಲೆಯಲ್ಲಿ ಸಿಂಗ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಪ್ರಧಾನಿ ಅವರು ಕಲ್ಲಿದ್ದಲು ಪ್ರಕರಣದ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ವಿಚಾರಣೆಗೆ ಹಾಜರಾಗುವ ಮುನ್ನ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಬಿಜೆಪಿ ವಕ್ತಾರ ಸೈಯ್ಯದ್ ಶಹನ್ವಾಜ್ ಹುಸ್ಸೇನ್ ಅವರು ಇಂದು ಪಾಟ್ನಾದಲ್ಲಿ ಹೇಳಿದ್ದಾರೆ.
ಕಲ್ಲಿದ್ದಲು ಹಗರಣದಿಂದ ಸಿಂಗ್ ಅವರು ಪಾರಾಗಲು ಸಾಧ್ಯವಿಲ್ಲ. ಈ ಹಿಂದೆ ಸಿಂಗ್ ಅವರು ಜಂಟಿ ಸದನ ಸಮಿತಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದರು, ಆದರೆ ಅದನ್ನು ಕೆಲವು ನಿಯಮಗಳಿಂದ ತಪ್ಪಿಸಿದರು. ಆದರೆ ಈಗ ಮಾತ್ರ ಅವರು ಹಗರಣದಿಂದ ಪಾರಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
'ನಾನೇನು ಕಾನೂನಿಗಿಂತ ದೊಡ್ಡವನಲ್ಲ, ಕಲ್ಲಿದ್ದಲು ಹಗರಣ ಸಂಬಂಧ ಬೇಕಾದರೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ'ಎಂದು ಮನಮೋಹನ್ ಸಿಂಗ್ ಹೇಳಿದ್ದರು. ಇದರ ಬೆನ್ನಲ್ಲೇ ಇಂದು ಬಿಜೆಪಿ ಪ್ರಧಾನಿ ಅವರನ್ನು ರಾಜಿನಾಮೆ ನೀಡುವಂತೆ ಒತ್ತಾಯಿಸಿದೆ.