ಶುಲ್ಕ ಪಾವತಿಸದ ವಿಜಯ್ ಮಲ್ಯ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು: ವಿಮಾನ ನಿಲ್ದಾಣದ ಶುಲ್ಕ ಪಾವತಿಸದ ಹಿನ್ನಲೆಯಲ್ಲಿ ಕಿಂಗ್ಫಿಶರ್ ಏರಲೈನ್ಸ್ ಮಾಲಿಕ ವಿಜಯ್ ಮಲ್ಯ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ.
ಹಣಕಾಸು ತೊಂದರೆ ಎದರುಸುತ್ತಿರುವ ಕಿಂಗ್ಫಿಶರ್ ಏರ್ಲೈನ್ಸ್, ಕಳೆದ ಒಂದು ವರ್ಷದಿಂದ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್)ದ ಶುಲ್ಕ ಪಾವತಿಸಿಲ್ಲ.
ಈ ಸಂಬಂಧ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ವಿಜಯ್ ಮಲ್ಯ ವಿರುದ್ಧ ಸಹಾಯಕ ಪೊಲೀಸ್ ಆಯುಕ್ತರಲ್ಲಿ ದೂರು ದಾಖಲಿಸಿತ್ತು. ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 21ರಂದು ಪ್ರಕರಣ ದಾಖಲಾಗಿದ್ದು, ಇಂದು ಎಫ್ಐಆರ್ ಹಾಕಲಾಗಿದೆ.
ವಿಮಾನ ನಿಲ್ದಾಣದ ಶುಲ್ಕ ಹಾಗೂ ಪ್ರಯಾಣಿಕರ ಸೇವಾ ಶುಲ್ಕವನ್ನು ಪಾವತಿಸಿಲ್ಲ ಎಂದು ಆರೋಪಿಸಲಾಗಿದ್ದು, ಮಲ್ಯ ಅವರ ವಿರುದ್ಧ ನಂಬಿಕೆ ದ್ರೋಹ, ವಂಚನೆ, ಒಳಸಂಚು ನಡೆಸಿದ ಆಪಾದನೆ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.