ರಾಹುಲ್ ಐಎಸ್‌ಐ ಹೇಳಿಕೆಯಿಂದ ದೂರ ಉಳಿದ ಗೃಹ ಸಚಿವಾಲಯ
ಪಾಕಿಸ್ತಾನದ ಐಎಸ್‌ಐ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿನ ಮುಸ್ಸಿಂ ಯುವಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂಬ..
ನವದೆಹಲಿ: ಪಾಕಿಸ್ತಾನದ ಐಎಸ್‌ಐ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿನ ಮುಸ್ಸಿಂ ಯುವಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆ ರಾಜಕಾರಣದ ಎಲ್ಲಾ ಕೋನಗಳಿಂದಲೂ ಟೀಕೆಗೊಳಗಾಗಿದೆ. ಅಲ್ಲದೆ ಇದೀಗ ಸ್ವತಃ ತಮ್ಮ ಸರ್ಕಾರವೇ ರಾಹುಲ್ ಹೇಳಿಕೆಯಿಂದ ದೂರ ಸರಿದಿದೆ.
ಕಾಂಗ್ರೆಸ್ ಯುವರಾಜನ ವಿವಾತಾದ್ಮಕ ಹೇಳಿಕೆಯಿಂದ ದೂರ ಉಳಿಯಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ಶನಿವಾರ ಮಾಧ್ಯಮಕ್ಕೆ ತಿಳಿಸಿವೆ.
ಕೇಂದ್ರ ಗುಪ್ತಚರ ಇಲಾಖೆ, ಪಾಕಿಸ್ತಾನದ ಐಎಸ್‌ಐ ಮುಜಾಫರ್‌ನಗರದಲ್ಲಿನ ಮುಸ್ಸಿಂ ಯುವಕರನ್ನು ಸಂಪರ್ಕಿಸಿದ ಬಗ್ಗೆ ಯಾವುದೇ ಮಾಹಿತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ನೀಡಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಇದೇ ವೇಳೆ ಉತ್ತರ ಪ್ರದೇಶ ಸರ್ಕಾರ ಸಹ ಗುಪ್ತಚರ ಇಲಾಖೆ ಐಎಸ್‌ಐ ಸಂಪರ್ಕದ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಹೇಳಿದೆ.
ಇನ್ನು ಪ್ರತಿಪಕ್ಷ ಬಿಜೆಪಿ ಈ ಸಂಬಂಧ ರಾಹುಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಗುಪ್ತಚರ ದಳದ ಮಾಹಿತಿ ರಾಹುಲ್ ಗಾಂಧಿಗೆ ಗೊತ್ತಾದದ್ದು ಹೇಗೆ ಎಂದು ಪ್ರಶ್ನಿಸಿದೆ. ಈ ಬಗ್ಗೆ ನಿನ್ನೆ ಮಾಧ್ಯಮಕ್ಕೆ ಮಾತನಾಡಿದ ಬಿಜೆಪಿ ವಕ್ತಾರ ಪ್ರಕಾಶ್ ಜಾವೇಡಕರ್ ಅವರು, ರಾಹುಲ್ ಗಾಂಧಿ ಪ್ರಧಾನಿಯೂ ಅಲ್ಲ, ಗೃಹ ಸಚಿವರೂ ಅಲ್ಲ. ಆದರೂ ಗುಪ್ತಚರ ಮಾಹಿತಿ ಅವರಿಗೆ ತಲುಪಿದ್ದು ಹೇಗೆ? ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರು ಉತ್ತರಿಸಬೇಕು ಎಂದು ಆಗ್ರಹಿಸಿದ್ದರು.
ಮಧ್ಯಪ್ರದೇಶದಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಿದ ರಾಹುಲ್, ಬಿಜೆಪಿಯನ್ನು ತೆಗಳುವ ವೇಳೆಯಲ್ಲಿ ಮುಜಾಫರನಗರ ಗಲಭೆಯನ್ನು ಪ್ರಸ್ತಾಪಿಸಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಕೋಮುಗಲಭೆಗಳಿಗೆ ಆ ಪಕ್ಷವೇ ಕಾರಣ. ಅಲ್ಲಿನ ಕೋಮುಗಲಭೆಯಿಂದಾಗಿ ಅಲ್ಲಿನ 15 ಸಂತ್ರಸ್ತ ಯುವಕರನ್ನು ಸಂಪರ್ಕಿಸಲು ಪಾಕ್‌ನ ಐಎಸ್‌ಐ ಏಜೆಂಟರು ಹವಣಿಸುತ್ತಿದ್ದಾರೆ ಎಂದಿದ್ದರು.