ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಂಜಯ್ ದತ್ ಕ್ಷಮಾಪಣೆ ಪ್ರಸ್ತಾವನೆ ಬಂದಿಲ್ಲ: ಮಹಾ ಸರ್ಕಾರ

Mainashree
Updated On : 26 Oct 2013, 3:38 am

ಮುಂಬೈ: ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರ ಕ್ಷಮಾಪಣೆ ಸಂಬಂಧ ಕೇಂದ್ರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಮಹಾರಾಷ್ಟ್ರದ ಸರ್ಕಾರ ಹೇಳಿದೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರದ ಗೃಹಮಂತ್ರಿ ಆರ್.ಆರ್ ಪಾಟೀಲ್ ಅವರು, ಸಂಜಯ್ ದತ್ ಶಿಕ್ಷೆ ಪ್ರಮಾಣ ಕಡಿತದ ಬಗ್ಗೆ ಹಾಗೂ ಕ್ಷಮಾಪಣೆ ನೀಡುವುದರ ಬಗ್ಗೆ ನಮಗೆ ಈವರೆಗೂ ಕೇಂದ್ರದಿಂದ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದ್ದಾರೆ.

ದತ್ ಸೋದರಿಯಾದ ಕಾಂಗ್ರೆಸ್ ಸಂಸದೆ ಪ್ರಿಯಾ ದತ್ ಅವರಾಗಲಿ ಅಥವಾ ಅವರ ಕುಟುಂಬದವರಾಗಲಿ ಕ್ಷಮಾಪಣೆ ಮನವಿಯನ್ನು ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಎಂದು ಸಾಬೀತಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಂಜಯ್ ದತ್ ಅವರ ಜೈಲು ಅವಧಿಯನ್ನು ಕಡಿತಗೊಳಿಸುವ ಸಂಬಂಧ ಕೇಂದ್ರ ಗೃಹ ಇಲಾಖೆ ಮಹಾರಾಷ್ಟ್ರ ಸರ್ಕಾರದ ಅಭಿಪ್ರಾಯ ಕೇಳಿದೆ ಎಂದು ವರದಿಗಳು ಪ್ರಕಟಗೊಂಡಿದ್ದವು. ಇದಕ್ಕೆ ಪ್ರತಿಕ್ರಯಿಸಿರುವ ಪಾಟೀಲ್, ನಮಗೆ ಈ ಸಂಬಂಧ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದಿದ್ದಾರೆ.

ಮಾದ್ಯಮಗಳ ವರದಿ ಪ್ರಕಾರ, ನ್ಯಾಯಾಮೂರ್ತಿ ಮಾರ್ಕಂಡೇಯಾ ಕಟ್ಜು ಅವರು ಸಂಜಯ್ ದತ್ ಅವರ ಜೈಲು ಅವಧಿಯನ್ನು ಕಡಿತಗೊಳಿಸುವಂತೆ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆ ಮಹಾರಾಷ್ಟ್ರದ ಸರ್ಕಾರಕ್ಕೆ ಅಭಿಪ್ರಾಯ ತಿಳಿಸುವಂತೆ ಪತ್ರ ಬರೆದಿದೆ ಎಂದು ಹೇಳಲಾಗಿತ್ತು.
53 ವರ್ಷದ ಸಂಜಯ್ ದತ್ ಅಕ್ಟೋಬರ್ 1ರಂದು ಯರವಾಡ ಜೈಲಿನಿಂದ ಪೆರೋಲ್ ಮೇಲೆ ಹೊರ ಬಂದಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ ಅವರ ಪೆರೋಲ್ ಅವಧಿಯನ್ನು 14 ದಿನ ವಿಸ್ತರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದರು.
1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟದಲ್ಲಿ ದೋಷಿ ಎಂದು ಹೇಳಿದ ಸುಪ್ರೀಂ ಕೋರ್ಟ್ ದತ್‌ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 20 ವರ್ಷಗಳ ಹಿಂದೆ ದತ್ 18 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರಿಂದ, ಬಾಕಿ ಉಳಿದ 42 ತಿಂಗಳುಗಳ ಶಿಕ್ಷೆಯನ್ನು ಇದೀಗ ಅನುಭವಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement