ನಿತೀಶ್ಗೆ ಜನರೇ ಪಾಠ ಕಲಿಸುತ್ತಾರೆ: ಮೋದಿ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಜನರೇ ಪಾಠ ಕಲಿಸುತ್ತಾರೆ ಎಂದು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ...
ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಜನರೇ ಪಾಠ ಕಲಿಸುತ್ತಾರೆ ಎಂದು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಇಂದು ಪಾಟ್ನಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೂಂಕಾರ್ ರ್ಯಾಲಿಯಲ್ಲಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ನಿತೀಶ್ ಕುಮಾರ್ ಅವರ ಅಹಂಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದಿದ್ದಾರೆ.
2006ರಲ್ಲಿ ಬಿಹಾರದ ಮುಖ್ಯಮಂತ್ರಿ ವೈಯಕ್ತಿಕ ಕಾರಣಕ್ಕಾಗಿ ಗುಜರಾತ್ಗೆ ಬಂದಾಗ, ನಾವು ಬಹಳ ಕಾಳಜಿಯಿಂದ ಸತ್ಕರಿಸಿದೆವು. ಇದು ನಮ್ಮ ಸಂಸ್ಕೃತಿ ಹೇಳಿಕೊಟ್ಟ ಪಾಠ ಎಂದು ಮೋದಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ಅಭಿವೃದ್ಧಿ ಕೆಲಸಗಳಾಗಿದ್ದರೆ, ಅದು ಕೇವಲ ನಮ್ಮ ಪಕ್ಷದ ಸಚಿವರು ಮಾಡಿರುವ ಕೆಲಸಗಳಿಂದ ಮಾತ್ರ. ಬಿಹಾರದ ನಾಯಕರು ನಾನು ಇಲ್ಲಿ ಬಂದು ಪಕ್ಷದ ಪ್ರಚಾರ ಮಾಡಬೇಕೆಂಬ ಆಸೆಯಿತ್ತು. ಆದರೆ ವರದಿಗಳು ಎನ್ಡಿಎ ವಿಭಜಿಸಿದ ಮಾಡಿದ ಆರೋಪಗಳನ್ನು ಮಾಡಿದವು. ಇಂತಹ ಯಾವುದೇ ಆರೋಪಗಳನ್ನು ನಾನು ಲೆಕ್ಕಿಸುವುದಿಲ್ಲ. ಜನರ ಒಳಿತಿಗಾಗಿ ನಾನು ಬಂದು ಪ್ರಚಾರ ಕಾರ್ಯ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ಯಾವಾಗಲು ನನ್ನ ವಿರುದ್ಧವಾಗಿಯೇ ಮಾತನಾಡುತ್ತಿದ್ದರು. ನನ್ನನ್ನು ಪ್ರಧಾನಿಯನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಕಿಡಿಕಾಡುತ್ತಿದ್ದರು. ಆದರೆ ಅವರು ಅಪಘಾತಕ್ಕೀಡಾದಾಗ ನಾನು ಅವರಿಗೆ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸಿದೆ. ಇದರ ಬಗ್ಗೆ ಲಾಲು ಅವರೇ ಮಾಧ್ಯಮಗಳಿಗೆ ಹೇಳಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.
ಬಿಹಾರದ ತತ್ವ ಸಿದ್ಧಾಂತಗಳನ್ನು ಇಲ್ಲಿನ ಜನತೆ ಅರಿತುಕೊಳ್ಳಬೇಕಾಗಿದೆ. ಹಾಗಾದರೆ ಮಾತ್ರ ಬಿಜೆಪಿ ನಾಯಕರು ಮುಖ್ಯಮಂತ್ರಿಯಾಗಲು ಸಾಧ್ಯ.
ಕಾಂಗ್ರೆಸ್ನೊಂದಿಗೆ ಜೆಡಿಯು ಮೈತ್ರಿಯಾದರೆ ನಾನು ಪ್ರಧಾನಿಯಾಗಬಹುದು ಎಂದು ನಿತೀಶ್ ಕೆಲವರ ಬಳಿ ಹೇಳಿಕೊಂಡಿದ್ದಾರೆ. ಈ ರೀತಿ ಹೇಳುವುದರ ಮುಖಾಂತರ ನಿತೀಶ್ ಕೇವಲ ಬಿಜೆಪಿಗಲ್ಲದೇ ಬಿಹಾರದ ಜನತೆಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಮೋದಿ ವಿಷಾಧಿಸಿದ್ದಾರೆ.
ಜೆಡಿಯು ನಮ್ಮ ಮೇಲೆ ಕೊಳಚೆಯನ್ನು ಎಸೆದಷ್ಟು ಕಮಲ ಸುಂದರವಾಗಿ ಅರಳುತ್ತದೆ ಎಂದಿರುವ ಮೋದಿ, ಈ ಕಾರ್ಯಕ್ರಮ ಭಾರತದಲ್ಲಿ ಇತಿಹಾಸವನ್ನೇ ಸೃಷ್ಟಿಸುತ್ತದೆ ಎಂದಿದ್ದಾರೆ.
ಮುಸ್ಲೀಂ ಮತ್ತು ಹಿಂದೂಗಳು ಒಗ್ಗಟ್ಟಾಗಿ ಬಡತನದಿಂದ ಮುಕ್ತರಾಗಬೇಕು. ಸರ್ಕಾರಕ್ಕೆ ಎಲ್ಲಾ ಧರ್ಮವು ಒಂದೇ ಆಗಿರುತ್ತದೆ ಎಂದು ಮೋದಿ ಹೇಳಿದ್ದಾರೆ.