ಪಾಟ್ನಾ ಬಾಂಬ್ ಸ್ಫೋಟಕ್ಕೆ ಒಳಸಂಚು: ನಿತೀಶ್
ಪಾಟ್ನಾ: ಪಾಟ್ನಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ಪಿತೂರಿ ನಡೆಸಲಾಗಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಭಾನುವಾರ ಪಾಟ್ನಾದಲ್ಲಿ ಸರಣಿ ಬಾಂಬ್ ಸ್ಫೋಟಗೊಂಡು ಐವರು ಸಾವನ್ನಪ್ಪಿದ್ದು, 83ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯನ್ನು ಖಂಡಿಸಿರುವ ನಿತೀಶ್, ಬಾಂಬ್ ಸ್ಫೋಟದ ಹಿಂದೆ ಒಳಸಂಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಮೃತಪಟ್ಟ ಕುಟುಂಬದವರಿಗೆ 5 ಲಕ್ಷ ಪರಿಹಾರ ಧನ ನೀಡಲಾಗುವುದು ಎಂದು ಘೋಷಿಸಿರುವ ನಿತೀಶ್, ಘಟನೆಗೆ ಕಾರಣವಾದವರನ್ನು ಶೀಘ್ರವಾಗಿ ಬಂಧಿಸಿ ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಘಟನೆಯನ್ನು ಖಂಡಿಸಿದ್ದು, ಶಾಂತಿಯನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ.
ಇತ್ತ ಪಾಟ್ನಾದಲ್ಲಿ ಬಿಜೆಪಿ ನಾಯಕರು, ಇದೊಂದು ಒಳಸಂಚಾಗಿದ್ದು, ಬಿಜೆಪಿ ರ್ಯಾಲಿಗೆ ಅಡ್ಡಿ ಪಡಿಸುವ ಉದ್ದೇಶದಿಂದಲೇ ಬಾಂಬ್ ಸ್ಫೋಟಿಸಿದ್ದಾರೆ. ಮೋದಿ ಅವರನ್ನು ಗುರಿಯಾಗಿಸಿಟ್ಟುಕೊಂಡು ದಾಳಿ ನಡೆಸಿದ್ದಾರೆ ಎಂದು ಆಪಾದಿಸಿದ್ದಾರೆ.