ಪಾಟ್ನಾ ಸರಣಿ ಸ್ಫೋಟ: ಇಬ್ಬರು ಶಂಕಿತ ಉಗ್ರರ ಬಂಧನ
ಪಾಟ್ನಾ: ನಿನ್ನೆ ಪಾಟ್ನಾದಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸೋಮವಾರ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ನಿನ್ನೆ ಪಾಟ್ನಾದ ಗಾಂಧಿ ಮೈದಾನದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕೈಗೊಂಡಿದ್ದ ರ್ಯಾಲಿ ಸಂದರ್ಭದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮತ್ತು ಪಾಟ್ನಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರಾದ ತೌಸೀಮ್ ಮತ್ತು ಇಮ್ತಿಯಾಜ್ ಎಂಬುವರನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಪಾಟ್ನಾದ ಹಿರಿಯ ಪೊಲೀಸ್ ಅಧಿಕಾರಿಯಾದ ಮನು ಮಹರಾಜ್ ಅವರು ಮಾಹಿತಿ ನೀಡಿದ್ದು, ಸ್ಪೋಟಕ್ಕೆ ಸಂಚು ರೂಪಿಸಿದ್ದ ಪ್ರಮುಖ ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಈತನೆ ಸ್ಫೋಟಕ್ಕೆ ಸಂಚು ರೂಪಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಬಾಂಬ್ ಸ್ಫೋಟಿಸಲು ಸುಮಾರು ಆರರಿಂದ ಏಳು ಮಂದಿ ಉಗ್ರರು ಪಾಲ್ಗೊಂಡಿರುವುದಾಗಿ ಮಾಹಿತಿ ನೀಡಿದ್ದಾನೆ. ಅದರಂತೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಕೆಲವೊಂದು ಕಡೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಅಲ್ಲದೆ ಶೀಘ್ರದಲ್ಲೇ ಸ್ಫೋಟದ ಕುರಿತು ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರ್ನಾಲ್ಕು ಮಂದಿಯ ಕೈವಾಡವಿರುವುದಾಗಿ ಶಂಕಿಸಲಾಗಿದ್ದು, ಈಗಾಗಲೇ ಅವರುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಹರಾಜ್ ತಿಳಿಸಿದ್ದಾರೆ.
ಮೋದಿ ಅವರ 'ಹೂಂಕಾರ್ ರ್ಯಾಲಿ' ಆರಂಭಕ್ಕೆ ಮುನ್ನವೇ ಬಿಹಾರ ರಾಜಧಾನಿ ಪಟನಾದಲ್ಲಿ 8 ಅಲ್ಪಪ್ರಮಾಣದ ಸರಣಿ ಸ್ಫೋಟಗಳು ಸಂಭವಿಸಿತ್ತು. ಈ ದುರಂತದಲ್ಲಿ ಆರು ಮಂದಿ ಅಸುನೀಗಿದ್ದಾರೆ. 83 ಮಂದಿ ಗಾಯಗೊಂಡಿದ್ದಾರೆ. ನಿನ್ನೆ ಬೆಳಗ್ಗೆ 9.30ರ ಸುಮಾರಿಗೆ ಪಟನಾ ರೇಲ್ವೆ ನಿಲ್ದಾಣದ ಪ್ಲಾಟ್‌ಫಾರಂ ಸಂಖ್ಯೆ 10ರಲ್ಲಿ ಮೊದಲ ಸ್ಫೋಟ ಸಂಭವಿಸಿತು. ಇದಾದ ಬಳಿಕ ರ್ಯಾಲಿ ನಡೆಯಬೇಕಾಗಿದ್ದ ಬೆಳಗ್ಗೆ 11.40ರಿಂದ 11.45ರ ನಡುವಿನ ಅವಧಿಯಲ್ಲಿ ಗಾಂಧಿ ಮೈದಾನ ಸುತ್ತಮುತ್ತ ಆರು ಅಲ್ಪಪ್ರಮಾಣದ ಸ್ಫೋಟಗಳು ಸಂಭವಿಸಿದವು.