ಪಾಟ್ನಾ ಸ್ಫೋಟದ ಬಗ್ಗೆ ಮೊದಲೇ ಮಾಹಿತಿ: ಬಿಹಾರ ಸಿಎಂಗೆ ಮುಜುಗರ
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಕೇಂದ್ರ ಸರ್ಕಾರ ಮೊದಲೇ ಮುನ್ಸೂಚನೆ ನೀಡಿತ್ತು..
ನವದೆಹಲಿ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಕೇಂದ್ರ ಸರ್ಕಾರ ಮೊದಲೇ ಮುನ್ಸೂಚನೆ ನೀಡಿತ್ತು ಎಂಬ ಮಾಹಿತಿ ಸೋಮವಾರ ಬಹಿರಂಗವಾಗಿದೆ.
ಇದರಿಂದ ಕೇಂದ್ರ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಭಾರಿ ಮುಜುಗರವಾಗಿದೆ.
ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೂಂಕಾರ್ ರ್ಯಾಲಿಗೆ ದಾಳಿಯ ಭೀತಿ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಬಿಹಾರ ಸರ್ಕಾರಕ್ಕೆ ಅಕ್ಯೋಬರ್ 24ರಂದೆ ಪತ್ರ ಬರೆದು ಮುನ್ಸೂಚನೆ ನೀಡಿದೆ. ಇದರಿಂದ ನಿತೀಶ್ ಕುಮಾರ್ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ.
ನಿನ್ನೆ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ನಿತೀಶ್ಕುಮಾರ್ ಸ್ಫೋಟ ಸಂಭವಿಸುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಗಳಿಂದ ಯಾವುದೇ ಪೂರ್ವಸೂಚನೆ ಇರಲಿಲ್ಲ. ಹೀಗಾಗಿ ರ್ಯಾಲಿಗೆ ಭದ್ರತೆ ಒದಗಿಸುವಲ್ಲಿ ಲೋಪವಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದರು. ಅಲ್ಲದೆ ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಉಲ್ಲಂಘಿಸುವ ಯತ್ನ ಇದಾಗಿದೆ ಎಂದು ಮುಖ್ಯಮಂತ್ರಿ ಆರೋಪಿಸಿದ್ದರು.