ಬಿಹಾರ ಸರ್ಕಾರ ಗುಪ್ತಚರ ಮಾಹಿತಿ ನಿರ್ಲಕ್ಷಿಸಿದೆ: ಜೇಟ್ಲಿ
ಪಾಟ್ನಾದಲ್ಲಿ ನರೇಂದ್ರ ಮೋದಿ ಅವರ ಹೂಂಕಾರ್ ರ್ಯಾಲಿ ವೇಳೆ ಸಂಭವಿಸಿದ ಸರಣಿ ಸ್ಫೋಟವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ...
ನವದೆಹಲಿ: ಪಾಟ್ನಾದಲ್ಲಿ ನರೇಂದ್ರ ಮೋದಿ ಅವರ ಹೂಂಕಾರ್ ರ್ಯಾಲಿ ವೇಳೆ ಸಂಭವಿಸಿದ ಸರಣಿ ಸ್ಫೋಟವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಗುಪ್ತಚರ ಇಲಾಖೆಯ ಮಾಹಿತಿಯನ್ನು ಬಿಹಾರ ಸರ್ಕಾರ ನಿಲರ್ಕ್ಷಿಸಿದೆ ಎಂದು ಸೋಮವಾರ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಫೋಟದ ಕುರಿತಾಗಿ ಗುಪ್ತಚರ ಇಲಾಖೆ ಮೊದಲೆ ಮಾಹಿತಿ ನೀಡಿದ್ದರೂ ಅದನ್ನು ತಡೆಯುವಲ್ಲಿ ನಿತೀಶ್ ಕುಮಾರ್ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ. ಭಯೋತ್ಪಾದಕ ಕೃತ್ಯದ ಬಗ್ಗೆ ಮೊದಲೇ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರು ಅದನ್ನು ಬಿಹಾರ ಸರ್ಕಾರ ನಿಲರ್ಕ್ಷಿಸಿದ್ದೇ ಘಟನೆಗೆ ಕಾರಣ ಎಂದಿದ್ದಾರೆ. ಅಲ್ಲದೆ ಗುಪ್ತಚರ ಮಾಹಿತಿ ನಿರ್ಲಕ್ಷಿಸಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಬಿಹಾರ ಸರ್ಕಾರ ಉಗ್ರರ ಬಗ್ಗೆ ಮೃದುಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅರುಣ್ ಜೇಟ್ಲಿ, ಇಂದೊಂದು ದುರಾದೃಷ್ಟಕರ. ಇಂತಹ ಘಟನೆ ನಡೆಯಬಾರದಾಗಿತ್ತು. ಆದರೆ ಸರ್ಕಾರದ ನಿಲರ್ಕ್ಷದಿಂದ ಸ್ಫೋಟ ಸಂಭವಿಸಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರ್ಯಾಲಿ ವೇಳೆ ಘಟನೆ ನಡೆದಿರುವುದು ದುರಾದೃಷ್ಟಕರ ಎಂದರು.
ಬಿಜೆಪಿ ರ್ಯಾಲಿಗೆ ಬಿಹಾರ ಸರ್ಕಾರ ಸರಿಯಾದ ಭದ್ರತೆ ಒದಗಿಸಿರಲಿಲ್ಲ. ರ್ಯಾಲಿಗೆ ಬರುವಂತ ಜನರನ್ನು ಸರಿಯಾದ ರೀತಿಯಲ್ಲಿ ಬಿಹಾರ ಪೊಲೀಸರು ತಪಾಸಣೆ ನಡೆಸಿಲ್ಲ. ತಪಾಸಣೆ ನಡೆಸದೇ ಗಾಂಧಿ ಮೈದಾನದೊಳಗೆ ಜನರನ್ನು ಬಿಟ್ಟಿದ್ದಾರೆ ಎಂದು ಜೇಟ್ಲಿ ಆರೋಪಿಸಿದ್ದಾರೆ. ಇದೇ ವೇಳೆ ಸ್ಫೋಟದ ಕುರಿತಾಗಿ ಸಂಪೂರ್ಣ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಜೇಟ್ಲಿ ಆಗ್ರಹಿಸಿದ್ದಾರೆ.