ಹೊತ್ತಿ ಉರಿದ ವೋಲ್ವೊ ಬಸ್: 44 ಮಂದಿ ಸಜೀವ ದಹನ
ಆಂಧ್ರಪ್ರದೇಶದ ಮೆಹಬೂಬ್‌ನಗರದ ಬಳಿ ಖಾಸಗಿ ಬಸ್ಸೊಂದು ಅಗ್ನಿಗಾಹುತಿಯಾದ ಭೀಕರ ಘಟನೆ ಬುಧವಾರ ಬೆಳಗಿನ ಜಾವ ಸಂಭವಿಸಿದೆ.
ಹೈದರಾಬಾದ್: ಆಂಧ್ರಪ್ರದೇಶದ ಮೆಹಬೂಬ್‌ನಗರದ ಬಳಿ ಖಾಸಗಿ ಬಸ್ಸೊಂದು ಅಗ್ನಿಗಾಹುತಿಯಾದ ಭೀಕರ ಘಟನೆ ಬುಧವಾರ ಬೆಳಗಿನ ಜಾವ ಸಂಭವಿಸಿದೆ. ದುರಂತದಲ್ಲಿ ಕರ್ನಾಟಕದ 28 ಪ್ರಯಾಣಿಕರು ಸೇರಿದಂತೆ 44 ಮಂದಿ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಜಬ್ಬಾರ್ ಟ್ರಾವೆಲ್ಸ್‌ಗೆ ಸೇರಿದ ವೋಲ್ವೊ ಬಸ್‌ಗೆ ಇಂದು ಬೆಳಗಿನ ಜಾವ 5.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಘೋರ ದುರಂತ ಸಂಭವಿಸಿದೆ.
ಬಸ್‌ನ ಚಾಲಕ ಮುಂದಿನ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ರೋಡ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಸ್‌ನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಬಸ್ ಸುಟ್ಟು ಕರಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಚಾಲಕ ಹಾಗೂ ಕ್ಲೀನರ್ ಸೇರಿದಂತೆ ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿ ಒಟ್ಟು 49 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಮೆಹಬೂಬ್‌ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಂದ್ರ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಜಬ್ಬಾರ್ ಟ್ರಾವೆಲ್ಸ್‌ನಿಂದ ಈವರೆಗೆ 29 ಪ್ರಯಾಣಿಕರ ಪಟ್ಟಿಯನ್ನು ಪಡೆದುಕೊಂಡಿದ್ದೇವೆ. ಇತರೆ ಪ್ರಯಾಣಿಕರು ಹಿಂದುಪುರ್ ಮತ್ತು ಅನಂತಪುರದಲ್ಲಿ ಬಸ್ ಹತ್ತಿದ್ದು, ಅವರ ವಿವರವನ್ನು ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.