ರಾತ್ರಿ ವೇಳೆ ಪೆಟ್ರೋಲ್ ಪಂಪ್ ಮುಚ್ಚುವ ಪ್ರಸ್ತಾಪಕ್ಕೆ ಪ್ರಧಾನಿ ನಕಾರ
ತೈಲ ಬಳಕೆಯನ್ನು ನಿಯಂತ್ರಿಸುವ ಸಂಬಂಧ ರಾತ್ರಿ ವೇಳೆ ಪೆಟ್ರೋಲ್ ಪಂಪ್ಗಳನ್ನು ಮುಚ್ಚಬೇಕು ಎಂಬ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ಅವರ...
ನವದೆಹಲಿ: ತೈಲ ಬಳಕೆಯನ್ನು ನಿಯಂತ್ರಿಸುವ ಸಂಬಂಧ ರಾತ್ರಿ ವೇಳೆ ಪೆಟ್ರೋಲ್ ಪಂಪ್ಗಳನ್ನು ಮುಚ್ಚಬೇಕು ಎಂಬ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ಅವರ ಪ್ರಸ್ತಾಪವನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ತಿರಸ್ಕರಿಸಿದ್ದಾರೆ.
ಮೊಯ್ಲಿ ಪ್ರಸ್ತಾಪಕ್ಕೆ ಪ್ರತಿಪಕ್ಷಗಳಿಂದ ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಧಾನಿ ಪೆಟ್ರೋಲ್ ಬಂಕ್ ಮುಚ್ಚುವ ಪ್ರಸ್ತಾಪವನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.
ದೇಶದ ಆಯಾತ-ನಿರ್ಯಾತ ಅಂತರ ಹೆಚ್ಚಳಕ್ಕೆ ತೈಲ ಆಮದು ಸಹ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ತೈಲ ಬಳಕೆಯನ್ನು ನಿಯಂತ್ರಿಸಲು ರಾತ್ರಿ ವೇಳೆ ಪೆಟ್ರೋಲ್ ಪಂಪ್ ಬಂದ್ ಮಾಡಬೇಕು ಎಂಬ ಪ್ರಸ್ತಾಪವನ್ನು ಮೊಯ್ಲಿ ನಿನ್ನೆ ಪ್ರಧಾನಿಯವರಿಗೆ ಸಲ್ಲಿಸಿದ್ದರು. ಆದರೆ ಇಂದು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮೊಯ್ಲಿ ಪ್ರಸ್ತಾಪಕ್ಕೆ ಪ್ರತಿಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯ ಪ್ರಸ್ತಾಪವನ್ನು ನಿರಾಕರಿಸಿದೆ.
ಉಲ್ಟಾ ಹೊಡೆದ ಮೊಯ್ಲಿ
ಇನ್ನು ನಿನ್ನೆಯಷ್ಟೆ ಆಯಾತ-ನಿರ್ಯಾತ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಶಿಫಾರಸು ಮಾಡಲಾಗಿದ್ದು, ಅವುಗಳಲ್ಲಿ ಪೆಟ್ರೋಲ್ ಪಂಪ್ಗಳನ್ನು ರಾತ್ರಿ ವೇಳೆ ಬಂದ್ ಮಾಡುವುದು ಒಂದು ಎಂದು ಹೇಳಿದ್ದ ಮೊಯ್ಲಿ, ಇಂದು ಯುಟರ್ನ್ ಹೊಡೆದಿದ್ದಾರೆ. ಪೆಟ್ರೋಲ್ ಪಂಪ್ಗಳನ್ನು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯಚರಣೆ ನಡೆಸುವ ಚಿಂತನೆ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.
ರಾತ್ರಿ ವೇಳೆ ಪೆಟ್ರೋಲ್ ಪಂಪ್ ಮುಚ್ಚುವ ಉಪಾಯ ಸರ್ಕಾರದ್ದಲ್ಲ. ಆದರೆ ಈ ಬಗ್ಗೆ ಸಾರ್ವಜನಕರಿಂದ ಕೆಲ ಸಲಹೆಗಳು ಬರುತ್ತಿದ್ದು, ಸರ್ಕಾರ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೊಯ್ಲಿ ಹೇಳಿದ್ದಾರೆ.