ದೆಹಲಿ ಗ್ಯಾಂಗ್ರೇಪ್: ಸೆ.10ಕ್ಕೆ ತೀರ್ಪು
ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು,..
ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು, ಸೆಪ್ಟೆಂಬರ್ 10ಕ್ಕೆ ಪ್ರಕರಣದ ಎರಡನೇ ತೀರ್ಪು ಪ್ರಕಟಗೊಳ್ಳಲಿದೆ.
ಡಿಸೆಂಬರ್ 16ರಂದು ನಡೆದ ಗ್ಯಾಂಗ್ರೇಪ್ ಪ್ರಕರಣದ ನಾಲ್ವರು ವಯಸ್ಕ ಆರೋಪಿಗಳ ವಿಚಾರಣೆಯನ್ನು ತ್ವರಿತಗತಿ ನ್ಯಾಯಾಲಯ ಪೂರ್ಣಗೊಳಿಸಿದ್ದು, ಸೋಮವಾರ ತನ್ನ ಅಂತಿಮ ತೀರ್ಪು ಪ್ರಕಟಿಸಲಿದೆ.
ಕಳೆದ ಶನಿವಾರವಷ್ಟೇ ಪ್ರಕರಣದ ಬಾಲಪರಾಧಿಗೆ ಬಾಲಪರಾಧ ನ್ಯಾಯ ಮಂಡಳಿ ಮೂರು ವರ್ಷ ಜೈಲು ಶಿಕ್ಷೆ ನೀಡಿತ್ತು. ಇದೀಗ ಇತರ ಆರೋಪಿಗಳ ವಿಚಾರಣೆಯೂ ಮುಕ್ತಾಯಗೊಂಡಿದ್ದು, ಈ ಕಾಮುಕರಿಗೆ ಯಾವ ಶಿಕ್ಷೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ
ಕಳೆದ ಡಿ.16ರಂದು 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಚಲಿಸುತ್ತಿದ್ದ ಬಸ್ಸಿನಲ್ಲೇ ಅತ್ಯಾಚಾರ ಎಸಗಲಾಗಿತ್ತು. ಈ ವೇಳೆ ತೀವ್ರ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿನಿ ಡಿ. 29ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ವಯಸ್ಕ ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿತ್ತು. ಇದರಲ್ಲಿ ಪ್ರಮುಖ ಆರೋಪಿ ರಾಮ್ಸಿಂಗ್ ಜೈಲಿನೊಳಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರಿಂದ ಆತನ ವಿರುದ್ಧದ ಪ್ರಕರಣವನ್ನು ಕೈಬಿಡಲಾಗಿದೆ.