ವಂಝಾರ ರಾಜಿನಾಮೆ ಅಂಗೀಕಾರ ಇಲ್ಲ
ನಕಲಿ ಎನ್‌ಕೌಂಟರ್ ಪ್ರಕರಣಗಳ ಆರೋಪದ ಮೇಲೆ ಜೈಲು ಸೇರಿರುವ ಗುಜರಾತ್‌ನ ವಿವಾದಾತ್ಮಕ ಹಿರಿಯ ಪೊಲೀಸ್...
ಅಹಮದಾಬಾದ್: ನಕಲಿ ಎನ್‌ಕೌಂಟರ್ ಪ್ರಕರಣಗಳ ಆರೋಪದ ಮೇಲೆ ಜೈಲು ಸೇರಿರುವ ಗುಜರಾತ್‌ನ ವಿವಾದಾತ್ಮಕ ಹಿರಿಯ ಪೊಲೀಸ್ ಅಧಿಕಾರಿ ಡಿ.ಜಿ ವಂಝಾರ ಅವರು ತಮ್ಮ ಐಪಿಎಸ್ ಹುದ್ದೆಗೆ ನೀಡಿದ್ದ ರಾಜಿನಾಮೆಯನ್ನು ಗುಜರಾತ್ ಸರ್ಕಾರ ಬುಧವಾರ ತಿರಸ್ಕರಿಸಿದೆ.
ನಕಲಿ ಎನ್‌ಕೌಂಟರ್ ಪ್ರಕರಣಗಳ ಕಾರಣದಿಂದಾಗಿ 2007ರಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಡಿ.ಜಿ ವಂಝಾರ ಅವರು ತಮ್ಮ ಐಪಿಎಸ್ ಹುದ್ದೆಗೆ ಮಂಗಳವಾರ ರಾಜಿನಾಮೆಯನ್ನು ನೀಡಿದ್ದರು. ಆದರೆ ವಂಝಾರ ಅವರ ರಾಜಿನಾಮೆಯನ್ನು ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ಕಾರ ತಿರಸ್ಕರಿಸಿದೆ.
ಮೂರು ನಕಲಿ ಎನ್‌ಕೌಂಟರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಏಳು ವರ್ಷಗಳಿಂದ ಜೈಲಿನಲ್ಲಿರುವ ವಂಝಾರ, ಮೋದಿ ಸರ್ಕಾರದ ವರ್ತನೆಗೆ ಬೇಸತ್ತು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು.
ಸಬರ್ಮತಿ ಜೈಲಿನಿಂದಲೇ ರಾಜ್ಯ ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ 10 ಪುಟಗಳ ರಾಜಿನಾಮೆ ಪತ್ರ ಬರೆದಿದ್ದು, ನಕಲಿ ಎನ್‌ಕೌಂಟರ್‌ಗಳು ಹಾಗೂ ಅದರಲ್ಲಿ ಭಾಗವಹಿಸಿದ್ದ ತನ್ನಂತ ನಿಷ್ಠಾವಂತರನ್ನು ಜೈಲಿಗಟ್ಟುವ ಮೂಲಕ ನರೇಂದ್ರ ಮೋದಿ ಅವರ ತಮ್ಮ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದರು. ಅಲ್ಲದೆ ನಕಲಿ ಎನ್‌ಕೌಂಟರ್‌ಗಳು ಗೃಹ ಸಚಿವ ಅಮಿತ್ ಶಾ ಅಣತಿಯಂತೆ ನಡೆಯುತ್ತಿತ್ತು ಎಂದು ಬರೆದಿದ್ದರು.
2004ರ ಇಶ್ರತ್ ಜಹಾನ್ ಎನ್‌ಕೌಂಟರ್, 2005ರ ಸೋಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್ ಹಾಗೂ 2006ರ ತುಳಿಸಿರಾಮ್ ಪ್ರಜಾಪತಿ ಎನ್‌ಕೌಂಟರ್‌ಗಳಲ್ಲಿ ಪಾತ್ರ ವಹಿಸಿದ್ದ ಆಪಾದನೆ ಮೇಲೆ ವಂಝಾರ ಜೈಲು ಸೇರಿದ್ದರು.