ಒಂದಿಂಚು ಭೂಮಿಯನ್ನು ಚೀನಾ ಅತಿಕ್ರಮಣ ಮಾಡಿಲ್ಲ: ಆಂಟನಿ
ಚೀನಾದಿಂದ ಭಾರತದ ಭೂಭಾಗ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ...
ನವದೆಹಲಿ: ಚೀನಾದಿಂದ ಭಾರತದ ಭೂಭಾಗ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ರಕ್ಷಣಾ ಸಚಿವ ಎ.ಕೆ. ಆಂಟನಿ, ಭಾರತದ ಒಂದಿಂಚೂ ಭೂಮಿಯನ್ನು ಚೀನಾ ಅತಿಕ್ರಮಿಸಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಗಡಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆಂಟನಿ, ಚೀನಾದಿಂದ ಭಾರತದ ಒಂದಿಂಚೂ ಭೂಮಿ ಕೂಡ ಅತಿಕ್ರಮಣವಾಗಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದರು. ಗಡಿ ರಕ್ಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಅಧ್ಯಕ್ಷ ಶ್ಯಾಮ್ ಸರಣ್ ಅವರು ನೀಡಿರುವ ವರದಿ ಪ್ರಕಾರ ಲಡಾಕ್ ಸೇರಿದಂತೆ ಗಡಿ ಪ್ರದೇಶದಲ್ಲಿ ಚೀನಾ ಭಾರತದ ಭೂಮಿ ಅತಿಕ್ರಮಣ ಮಾಡಿಲ್ಲ ಎಂದು ತಿಳಿಸಿದರು.
ಇದೇ ವೇಳೆ, ಶ್ಯಾಮ್ ಸರಣ್ ನೀಡಿರುವ ವರದಿ ಪ್ರಕಾರ ಗಡಿ ಭಾಗದಲ್ಲಿ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ಲಡಾಕ್‌ಗೆ ಯುದ್ಧ ಸಾಮಗ್ರಿಗಳನ್ನು ಸಾಗಿಸುವ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು, ಅಲ್ಲದೆ ದೇಶದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಮುಲಾಯಂ ಸಿಂಗ್ ಯಾದವ್ ಅವರು, ಚೀನಾ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಭಾರತದ ಗಡಿಭಾಗ ಲಡಾಕ್‌ನಲ್ಲಿ ಚೀನಾ ಸೈನಿಕರು ಸುಮಾರು 640 ಅಡಿಗಳಷ್ಟು ಪ್ರದೇಶವನ್ನು ಅತಿಕ್ರಮಿಸಿ ಒಳ ಪ್ರವೇಶಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಪ್ರತಿಪಕ್ಷ ಬಿಜೆಪಿ ಸಹ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿತ್ತು. ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರ ಹೇಳಿಕೆ ಸಮರ್ಪಕವಾಗಿಲ್ಲ ಎಂದು ಬಿಜೆಪಿ ಸದಸ್ಯರು ತೀವ್ರ ಕೋಲಾಹಲ ಎಬ್ಬಿಸಿದರು ಇದರಿಂದಾಗಿ ಕಲಾಪವನ್ನು ಮುಂದೂಡಲಾಯಿತು.