ತೆಲಂಗಾಣ ವಿವಾದ: ಪೊಲೀಸರೊಂದಿಗೆ ಉ.ವಿವಿ ವಿದ್ಯಾರ್ಥಿಗಳ ಘರ್ಷಣೆ
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಮತ್ತೆ ಬೀದಿಗಿಳಿದಿರುವ ಉಸ್ಮಾನಿಯ ವಿಶ್ವವಿದ್ಯಾಯಲ ವಿದ್ಯಾರ್ಥಿಗಳು...
ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಮತ್ತೆ ಬೀದಿಗಿಳಿದಿರುವ ಉಸ್ಮಾನಿಯ ವಿಶ್ವವಿದ್ಯಾಯಲ ವಿದ್ಯಾರ್ಥಿಗಳು ಶನಿವಾರ ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ.
ಮತ್ತೊಂದೆಡೆ ಅಖಂಡ ಆಂಧ್ರಕ್ಕಾಗಿ ಆಗ್ರಹಿಸಿ ನಡೆಯುತ್ತಿರು ಹೋರಾಟ ತೀವ್ರಗೊಳ್ಳುತ್ತಿದ್ದು, ಸಿಮಾಂಧ್ರ ಉದ್ಯೋಗಿಗಳು ನಡೆಸುತ್ತಿರುವ 'ಸೇವ್ ಆಂಧ್ರ' ಸಭೆಯನ್ನು ಹತ್ತಿಕ್ಕಲು ಉಸ್ಮಾನಿಯ ವಿಶ್ವವಿದ್ಯಾಯಲದ ವಿದ್ಯಾರ್ಥಿಗಳು ಮುಂದಾದರು. ಈ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಎಲ್.ಬಿ. ಸ್ಟೇಡಿಯಂನಲ್ಲಿ ಸಿಮಾಂದ್ರ ಉದ್ಯೋಗಿಗಳು 'ಸೇವ್ ಆಂಧ್ರ' ಸಭೆಯನ್ನು ನಡೆಸುತ್ತಿದ್ದು, ಉದ್ಯೋಗಿಗಳು ನಡೆಸುತ್ತಿರುವ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಪೊಲೀಸರನ್ನು ಕೇಳಿದ ತೆಲಂಗಾಣ ವಿದ್ಯಾರ್ಥಿಗಳು ಸ್ಟೇಡಿಯಂ ಒಳಗೆ ಹೋಗಲು ಪ್ರಯತ್ನಿಸಿದರು.
ಎನ್ಸಿಸಿ ಗೇಟ್ ಬಳಿ ಅತಿಕ್ರಮವಾಗಿ ಪ್ರವೇಶಲು ಯತ್ನಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಡೆದ್ದಿದ್ದಾರೆ. ಅಲ್ಲದೆ ಈ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದರು. ಈ ಸಂದರ್ಭದಲ್ಲಿ ಪೊಲೀಸರ ಹಾಗೂ ವಿದ್ಯಾರ್ಥಿಗಳ ನಡುವೆ ಘರ್ಷಣೆ ಸಂಭವಿಸಿದೆ.
ಪೊಲೀಸರ ಈ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆ. ಹೀಗಾಗಿ ಘಟನೆಯಲ್ಲಿ 3 ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಗುಂಪನ್ನು ಚದುರಿಸಲು ಪೊಲೀಸರು ಆಶ್ರುವಾಯು ಪ್ರಯೋಗಿಸಿ, ಲಾಠಿ ಜಾರ್ಜ್ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಹಲವಾರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.