ಇಸ್ಕಾನ್ ಕಾಂಪೌಂಡ್ ಕುಸಿತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ವಸಂತಪುರದ ಇಸ್ಕಾನ್ ದೇವಾಲಯದ ಕಾಂಪೌಂಡ್ ಕುಸಿತ ದುರಂತದಲ್ಲಿ..
ಬೆಂಗಳೂರು: ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ವಸಂತಪುರದ ಇಸ್ಕಾನ್ ದೇವಾಲಯದ ಕಾಂಪೌಂಡ್ ಕುಸಿತ ದುರಂತದಲ್ಲಿ ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ 5 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ರುಪಾಯಿ ಪರಿಹಾರ ನೀಡುವುದಾಗಿ ಇಸ್ಕಾನ್ ಆಡಳಿತ ಮಂಡಳಿ ಮಂಗಳವಾರ ಘೋಷಿಸಿದೆ.
ಇಂದು ನಡೆದ ಇಸ್ಕಾನ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈಗಿರುವ ಕಾಂಪೌಂಡನ್ನು ಸಂಪೂರ್ಣ ತೆರವುಗೊಳಿಸಿ, 20 ಅಡಿ ಹಿಂಭಾಗದಲ್ಲಿ ಹೊಸ ಕಾಂಪೌಂಡು ನಿರ್ಮಾಣಕ್ಕೆ ಸಭೆ ಒಪ್ಪಿಗೆ ಸೂಚಿಸಿದೆ. ಅಲ್ಲದೆ ಮೃತರ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಇಸ್ಕಾನ್ ಒಪ್ಪಿದ್ದು, 4 ತಿಂಗಳಲ್ಲೆ ಮನೆ ನಿರ್ಮಿಸುವುದಾಗಿ ಹೇಳಿದೆ.
ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರುಪಾಯಿ ಪರಿಹಾರ ಪ್ರಕಟಿಸಿದೆ.
ವಸಂತಪುರದಲ್ಲಿ ಭವ್ಯ ಇಸ್ಕಾನ್ ದೇವಾಲಯ ನಿರ್ಮಾಣವಾಗುತ್ತಿದ್ದು, ನಿರ್ಮಾಣ ಹಂತದಲ್ಲಿದ್ದ ಕಾಂಪೌಂಡ್ ನಿನ್ನೆ ಕುಸಿದು ಬಿದ್ದ ಪರಿಣಾಮ ಇಬ್ಬರು ಬಾಲಕಿಯರೂ ಸೇರಿದಂತೆ ಮೂವರು ಮೃತಪಟ್ಟಿದ್ದರು ಮತ್ತು ಮೂವರು ಗಾಯಗೊಂಡಿದ್ದರು. ಇಸ್ಕಾನ್ ಆವರಣದಲ್ಲಿ ನಿರ್ಮಾಣವಾಗುತ್ತಿದ್ದ ಈ ಗೋಡೆ ನಾಲ್ಕು ಮನೆಗಳ ಮೇಲೆ ಉರುಳಿಬಿದ್ದು ದುರಂತ ಸಂಭವಿಸಿತ್ತು.