ಉ.ಪ್ರ. ಘರ್ಷಣೆ: ಸಾವಿನ ಸಂಖ್ಯೆ 38ಕ್ಕೇರಿಕೆ, 360 ಮಂದಿ ಬಂಧನ
ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಭುಗಿಲ್ಲೆದ್ದಿರುವ ಕೋಮು ಗಲಭೆಗೆ ಬಲಿಯಾದವರ ಸಂಖ್ಯೆ..
ಮುಜಾಫರ್‌ನಗರ: ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಭುಗಿಲ್ಲೆದ್ದಿರುವ ಕೋಮು ಗಲಭೆಗೆ ಬಲಿಯಾದವರ ಸಂಖ್ಯೆ ಮಂಗಳವಾರ 38ಕ್ಕೆ ಏರಿದ್ದು, ಗಲಭೆ ಸಂಬಂಧ ಈವರೆಗೆ 360 ಮಂದಿಯನ್ನು ಬಂಧಿಸಲಾಗಿದೆ.
ಎರಡು ಸಮುದಾಯಗಳ ನಡುವಿನ ಘರ್ಷಣೆಯ ಪರಿಣಾಮವಾಗಿ ಜಿಲ್ಲೆಯಲ್ಲಿ ಇಂದು ಸಹ ಕರ್ಫ್ಯೂ ಮುಂದುವರೆದಿದೆ. ಹಿಂಸಾಚಾರ ಪ್ರಕರಣ ಸಂಬಂಧ 360 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಕೆಲವು ಗಲಭೆ ಪೀಡಿತ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದ್ದಾರೆ.
ಹಿಂಸಾಚಾರದಲ್ಲಿ ಈವರೆಗೆ ಒಟ್ಟು 38 ಮಂದಿ ಮೃತಪಟ್ಟಿದ್ದು, ಮುಜಾಫರ್‌ನಗರ ಜಿಲ್ಲೆಯಲ್ಲೇ 32 ಮಂದಿ ಮೃತಪಟ್ಟಿದ್ದಾರೆ ಮತ್ತು 81 ಮಂದಿ ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶ ಗೃಹ ಕಾರ್ಯದರ್ಶಿ ಕಮಲ್ ಸೆಕ್ಸೆನಾ ಅವರು ಲಖನೌನಲ್ಲಿ ತಿಳಿಸಿದ್ದಾರೆ.
ಹೊಸದಾಗಿ ಹಿಂಸಾಚಾರ ನಡೆದ ಬಗ್ಗೆ ಯಾವುದೇ ವರದಿಯಾಗಿಲ್ಲ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸೆಕ್ಸೆನಾ ಅವರು ಹೇಳಿದ್ದಾರೆ.