ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೆಹಲಿ ಗ್ಯಾಂಗ್‌ರೇಪ್: ಕಾಮುಕರಿಗೆ ಗಲ್ಲು ಶಿಕ್ಷೆಗೆ ಕುಟುಂಬ ಒತ್ತಾಯ

ದೆಹಲಿ ಗ್ಯಾಂಗ್ ಪ್ರಕರಣದ ಎರಡನೇ ತೀರ್ಪು ಇಂದು ಮಧ್ಯಾಹ್ನ 12.30ಕ್ಕೆ ಹೊರಬಿದ್ದಿದ್ದು, ನಾಳೆ ಶಿಕ್ಷೆಯ..

Lingaraj Badiger
Updated On : 10 Sept 2013, 1:10 am

ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ದೆಹಲಿ ಗ್ಯಾಂಗ್ ಪ್ರಕರಣದ ಎರಡನೇ ತೀರ್ಪು ಇಂದು ಮಧ್ಯಾಹ್ನ 12.30ಕ್ಕೆ ಹೊರಬಿದ್ದಿದ್ದು, ನಾಳೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಈ ನಡುವೆ ಪ್ರಕರಣದ ನಾಲ್ವರು ವಯಸ್ಕ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಯುವತಿ ಕುಟುಂಬ ಮಂಗಳವಾರ ಒತ್ತಾಯಿಸಿದೆ.

ಪ್ರಕರಣದ ತ್ವರಿತ ವಿಚಾರಣೆ ನಡೆಸಿದ ದೆಹಲಿ ಸಾಕೇತ್ ಕೋರ್ಟ್ ಇಂದು ತನ್ನ ಅಂತಿಮ ತೀರ್ಪು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ಯುವತಿ ಕುಟುಂಬ ಈಗಾಗಲೇ ಕೋರ್ಟ್‌ಗೆ ಆಗಮಿಸಿದ್ದು, ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈಗ ನಮ್ಮ ಮಗಳು ಮರಳಿ ಬರುವುದಿಲ್ಲ. ಆದರೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಮಾತ್ರ ನಮ್ಮ ಮಗಳಿಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಯುವತಿ ತಾಯಿ ಹೇಳಿದ್ದಾರೆ. ಅಲ್ಲದೆ ಗಲ್ಲು ಶಿಕ್ಷೆಯನ್ನು ಹೊರತುಪಡಿಸಿ ಬೇರೆ ಯಾವುದೇ ಶಿಕ್ಷೆ ನೀಡಿದರೂ ಆದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಯುವತಿ ತಂದೆ ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಪ್ರಕರಣದ ಬಾಲಪರಾಧಿಗೆ ಬಾಲಪರಾಧ ನ್ಯಾಯಮಂಡಳಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯ ಬಗ್ಗೆಯೂ ಯುವತಿ ಕುಟುಂಬ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ ಬಾಲಪರಾಧ ನ್ಯಾಯಾಮಂಡಳಿಯ ತೀರ್ಪುನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದರು.

ಡಿ.16ರಂದು 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಚಲಿಸುತ್ತಿದ್ದ ಬಸ್ಸಿನಲ್ಲೇ ಅತ್ಯಾಚಾರ ಎಸಗಲಾಗಿತ್ತು. ಈ ವೇಳೆ ತೀವ್ರ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿನಿ ಡಿ. 29ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ವಯಸ್ಕ ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿತ್ತು. ಇದರಲ್ಲಿ ಪ್ರಮುಖ ಆರೋಪಿ ರಾಮ್‌ಸಿಂಗ್ ಜೈಲಿನೊಳಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರಿಂದ ಆತನ ವಿರುದ್ಧದ ಪ್ರಕರಣವನ್ನು ಕೈಬಿಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement