ದೆಹಲಿ ಗ್ಯಾಂಗ್‌ರೇಪ್: ಕಾಮುಕರು ತಪ್ಪಿತಸ್ಥರೆಂದು ತೀರ್ಪು
ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ದೆಹಲಿ ಗ್ಯಾಂಗ್ ಪ್ರಕರಣದ ಎರಡನೇ ತೀರ್ಪು ಮಂಗಳವಾರ ಪ್ರಕಟವಾಗಿದ್ದು,..
ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ದೆಹಲಿ ಗ್ಯಾಂಗ್ ಪ್ರಕರಣದ ಎರಡನೇ ತೀರ್ಪು ಮಂಗಳವಾರ ಪ್ರಕಟವಾಗಿದ್ದು, ನಾಲ್ವರು ಕಾಮುಕರು ತಪ್ಪಿತಸ್ಥರು ಎಂದು ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ಹೇಳಿದೆ.
23 ವರ್ಷದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ಸಾಕೇತ್ ಕೋರ್ಟ್, ಇಂದು ತನ್ನ ಅಂತಿಮ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಸಾಕೇತ್ ಕೋರ್ಟ್‌ನ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಯೋಗೇಶ್ ಖನ್ನಾ ಅವರು ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು.
ಪ್ರಕರಣದ ಆರು ಆರೋಪಿಗಳ ಪೈಕಿ ನಾಲ್ವರು ವಯಸ್ಕ ಆರೋಪಿಗಳಾದ ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಪವನ್ ಗುಪ್ತ ಮತ್ತು ಮುಕೇಶ್ ಸಿಂಗ್ ವಿರುದ್ಧದ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಆರೋಪಗಳು ಸಾಬೀತಾಗಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಇನ್ನು ಕಳೆದ ವಾರವಷ್ಟೇ ಪ್ರಕರಣದ ಬಾಲಪರಾಧಿಗೆ ಬಾಲಪರಾಧ ನ್ಯಾಯಮಂಡಳಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಮತ್ತೊರ್ವ ಆರೋಪಿ ರಾಮಸಿಂಗ್ ಜೈಲಿನಲ್ಲೇ ನೇಣಿಗೆ ಶರಣಾಗಿದ್ದ.
ಈ ಮಧ್ಯೆ, ಪ್ರಕರಣದ ವಿಚಾರಣೆ ನ್ಯಾಯಯುತವಾಗಿ ನಡೆದಿಲ್ಲ ಎಂದು ಆರೋಪಿಸಿರುವ ಆರೋಪಿಗಳ ಪರ ವಕೀಲ ಎ.ಪಿ.ಸಿಂಗ್, ಸಾಕೇತ್ ಕೋರ್ಟ್ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಈ ತೀರ್ಪು ರಾಜಕೀಯ ದುರುದ್ದೇಶದಿಂದ ಕೂಡಿದೆ. ಜನರನ್ನು ಮೆಚ್ಚಿಸಲು ಆರೋಪಿಗಳನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಲಾಗಿದೆ ಎಂದಿದ್ದಾರೆ.
ಪೊಲೀಸರ ತನಿಖೆಗೆ ಕೋರ್ಟ್ ಪ್ರಶಂಸೆ
ದೇಶವನ್ನೆ ಬೆಚ್ಚಿಬೀಳಿಸಿದ್ದ ದೆಹಲಿ ಗ್ಯಾಂಗ್‌ರೇಪ್ ಪ್ರಕರಣದ ತನಿಖೆ ನಡೆಸಿದ ಪೊಲೀಸರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ನ್ಯಾಯಾದೀಶ ಯೋಗೇಶ್ ಖನ್ನಾ ಅವರು, ಪೊಲೀಸರು ವೈಜ್ಞಾನಿಕವಾಗಿ ತನಿಖೆ ನಡೆಸಿದ್ದಾರೆ. ಪ್ರಕರಣದಲ್ಲಿ ಪೊಲೀಸರ ತನಿಖೆ ಶ್ಲಾಘನೀಯ. ಬೇರೆ ಪ್ರಕರಣಗಳಲ್ಲೂ ಪೊಲೀಸರು ಇದೇ ರೀತಿಯ ತನಿಖೆ ನಡೆಸಬೇಕು ಎಂದರು.
ಕಳೆದ ಡಿ.16ರಂದು 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಚಲಿಸುತ್ತಿದ್ದ ಬಸ್ಸಿನಲ್ಲೇ ಅತ್ಯಾಚಾರ ಎಸಗಲಾಗಿತ್ತು. ಈ ವೇಳೆ ತೀವ್ರ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿನಿ ಡಿ. 29ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ವಯಸ್ಕ ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿತ್ತು. ಇದರಲ್ಲಿ ಪ್ರಮುಖ ಆರೋಪಿ ರಾಮ್‌ಸಿಂಗ್ ಜೈಲಿನೊಳಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರಿಂದ ಆತನ ವಿರುದ್ಧದ ಪ್ರಕರಣವನ್ನು ಕೈಬಿಡಲಾಗಿತ್ತು.