ಉ.ಪ್ರ.ಘರ್ಷಣೆ: ಸಾವಿನ ಸಂಖ್ಯೆ 48ಕ್ಕೆ ಏರಿಕೆ
ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯಲ್ಲಿ ಹೊತ್ತಿಕೊಂಡಿರುವ ಕೋಮು ಗಲಭೆಗೆ ಬಲಿಯಾದವ..
ಮುಜಾಫರ್ನಗರ: ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯಲ್ಲಿ ಹೊತ್ತಿಕೊಂಡಿರುವ ಕೋಮು ಗಲಭೆಗೆ ಬಲಿಯಾದವರ ಸಂಖ್ಯೆ ಬುಧವಾರ 48ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಮಧ್ಯೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯವರೆಗೆ ಕರ್ಫ್ಯೂ ಹಿಂಪಡೆಯಲಾಗಿದೆ ಎಂದು ಘೋಷಿಸಿದೆ. ನಿನ್ನೆ ಸಹ ಹಿಂಸಾಚಾರ ಪೀಡಿತ ಮೂರು ಜಿಲ್ಲೆಗಳಲ್ಲಿ ಎರಡು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿತ್ತು.
ಎರಡು ಕೋಮುಗಳ ನಡುವೆ ಹಿಂಸಾಚಾರ ಸಂಭವಿಸಿದ್ದ ಹಿನ್ನೆಲೆಯಲ್ಲಿ ಕಳೆದ ಶನಿವಾರ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಡಿಜಿ(ಕಾನೂನು ಸುವ್ಯವಸ್ಥೆ) ಅರುಣ್ ಕುಮಾರ್ ಅವರು ತಿಳಿಸಿದ್ದಾರೆ.
ಅಖಿಲೇಶ್ ಎಚ್ಚರಿಕೆ: ಇದೇ ವೇಳೆ, ಕೋಮು ಹಿಂಸೆಗೆ ಪ್ರೇರೇಪಿಸುತ್ತಿರುವವರ ಹಾಗೂ ರಾಜ್ಯದಲ್ಲಿ ಸೌಹಾರ್ದತೆ ಕೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಅಖಿಲೇಶ್ ಯಾದವ್ ಎಚ್ಚರಿಕೆ ನೀಡಿದ್ದಾರೆ. ಏತನ್ಮಧ್ಯೆ, ಈಗ ಉ.ಪ್ರದೇಶದ ಹಿಂಸಾಚಾರವನ್ನು ಸೂಕ್ತವಾಗಿ ನಿಯಂತ್ರಿಸದಿದ್ದರೆ ಅದು ಇತರೆ ರಾಜ್ಯಗಳಿಗೂ ವ್ಯಾಪಿಸುವ ಸಾಧ್ಯತೆಯಿದೆ. ಆಗ ಅದನ್ನು ನಿಯಂತ್ರಿಸಲಸಾಧ್ಯವಾಗಲಿದೆ ಎಂದು ಕೇಂದ್ರ ಸಚಿವ, ಆರ್ಎಲ್ಡಿ ನಾಯಕ ಅಜಿತ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.