ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ: ಮುಲಾಯಂ
ಆಗ್ರ: 2014ರ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಪೂರ್ವ ನಿಯೋಜಿತ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಆದರೆ ಯಾವುದೇ ಕಾರಣಕ್ಕೂ ಯಾವುದೇ ಪಕ್ಷದೊಂದಿಗು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಇಂದು ನಡೆದ ಸಭೆಯಲ್ಲಿ ಮುಜಾಫರ್‌ನಗರದಲ್ಲಿ ಭುಗಿಲೆದ್ದಿರುವ ಕೋಮುಗಲಭೆ ಕುರಿತಂತೆ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿದರು.
ಇದೇ ವೇಳೆ ಮಾತನಾಡಿದ, ಸಂಸದ ಆರ್.ಎಂ ಗೋಪಾಲ್ ಯಾದವ್ ಅವರು ಇಂದಿನ ಸಭೆಗೆ ಪಕ್ಷ ಪ್ರಭಾವಿ ನಾಯಕ ಅಜಂ ಖಾನ್ ಅವರು ಗೈರಾಗಿದ್ದು, ಅವರಿಗೆ ಬೇರೆ ಪ್ರಮುಖ ಕೆಲಸವಿದ್ದಿದ್ದರಿಂದ ಅವರು ಸಭೆಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಇದರಲ್ಲಿ ಭಿನ್ನಾಭಿಪ್ರಾಯ ಕಲ್ಪಿಸುವ ಅಗತ್ಯವಿಲ್ಲ ಎಂದರು. ಕೋಮುಗಲಭೆ ನಿಯಂತ್ರಿಸಲು ಸರ್ಕಾರ ಅಗತ್ಯಕ್ರಮ ತೆಗೆದುಕೊಂಡಿದೆ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಮುಲಾಯಂ ಅವರ ಅಭಿಪ್ರಾಯವನ್ನೇ ಸಮರ್ಥಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು. ಕೋಮುಗಲಭೆಗೆ ಸಂಬಂಧಿಸಿದಂತೆ ಸರ್ಕಾರ ಸಹ ಶಾಂತಿಯುತ ವಾತಾವರಣ ಸೃಷ್ಟಿಸಲು ಶ್ರಮಿಸುತ್ತಿದೆ. ಕೋಮುಗಲಭೆ ನಡೆಯುತ್ತಿರುವುದು ಎರಡು ಕೋಮುಗಳ ನಡುವೆ ಹೊರತು ಇಂದೊಂದು ಸಾಮುದಾಯಿಕ ಗಲಭೆಯಲ್ಲ ಎಂದು ತಿಳಿಸಿದ್ದಾರೆ.