ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಹುಲ್ ಗಾಂಧಿ ನಮ್ಮ ಪ್ರಧಾನಿ ಅಭ್ಯರ್ಥಿ: ಶಿಂಧೆ

ಯುವರಾಜನ ಪಟ್ಟಾಭಿಷೇಕಕ್ಕೆ ಕಾಂಗ್ರೆಸ್‌ನಲ್ಲಿ ಎಲ್ಲ ಸಿದ್ಧತೆಗಳು ನಡೆಯುತ್ತಿದ್ದು, ಮೊನ್ನೆಯಷ್ಟೆ ಪ್ರಧಾನಮಂತ್ರಿ...

Vishwanath S
Updated On : 11 Sept 2013, 4:17 am

ನವದೆಹಲಿ: ಯುವರಾಜನ ಪಟ್ಟಾಭಿಷೇಕಕ್ಕೆ ಕಾಂಗ್ರೆಸ್‌ನಲ್ಲಿ ಎಲ್ಲ ಸಿದ್ಧತೆಗಳು ನಡೆಯುತ್ತಿದ್ದು, ಮೊನ್ನೆಯಷ್ಟೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಯುವರಾಜ ರಾಹುಲ್ ಗಾಂಧಿ ಅವರ ಕೈ ಕೆಳಗೆ ಕೆಲಸ ಮಾಡಲು ಸಿದ್ಧ ಎಂದು ಹೇಳಿದ್ದರು. ಇದೀಗ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ರಾಹುಲ್ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಈ ಮೊದಲೇ ಹೇಳಿದ್ದೆ, ಪ್ರಸ್ತುತ ಪ್ರಧಾನಿ ಅಭ್ಯರ್ಥಿಯ ಆಯ್ಕೆಗೆ ರಾಹುಲ್ ಗಾಂಧಿಯೆ 'ಅತ್ಯುತ್ತಮ ಆಯ್ಕೆ'ಯಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲು ನಾನು ಸಿದ್ಧ ಎಂದು ಶಿಂಧೆ ತಿಳಿಸಿದ್ದಾರೆ.

ಕಳೆದ ಭಾನುವಾರ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕೆಲಸ ಮಾಡಲು ನನಗೆ ಸಂತೋಷ ಎಂದು ಹೇಳುವ ಮೂಲಕ ಮನಮೋಹನ್ ಸಿಂಗ್ ಅವರು, ರಾಹುಲ್ ನಾಯಕತ್ವವನ್ನು ಒಪ್ಪಿಕೊಂಡಿದ್ದರು. ಇದರ ಬೆನ್ನಲ್ಲೇ ಸುಶೀಲ್ ಕುಮಾರ್ ಶಿಂಧೆ ಅವರು ಸಹ ರಾಹುಲ್ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದು, ಇದರೊಂದಿಗೆ ರಾಹುಲ್ ಗಾಂಧಿ ಪರ್ವ ಆರಂಭವಾಗಲಿದೆ.

ಪ್ರತಿಪಕ್ಷ ಬಿಜೆಪಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವುದರಿಂದ ಮೋದಿಗೆ ಪೈಪೋಟಿ ನೀಡಲು ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಕಣಕ್ಕಿಳಿಸಲು ಸಜ್ಜಾಗಿದೆ.

ಕೋಮುಗಲಭೆಗೆ ರಾಜಕೀಯ ಪಕ್ಷಗಳು ಕುಮ್ಮಕ್ಕು
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಉಂಟಾಗಿರುವ ಕೋಮುಗಲಭೆಗೆ ಕೆಲ ರಾಜಕೀಯ ಪಕ್ಷಗಳು ಕುಮ್ಮಕ್ಕು ನೀಡುತ್ತಿರುವುದರಿಂದ ಗಲಭೆ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಶಿಂಧೆ ಹೇಳಿದ್ದಾರೆ. ರಾಜಕೀಯ ದುರುದ್ದೇಶ ಕೋಮುಗಲಭೆಗೆ ಕಾರಣವಾಗಿದೆ. ಯಾವ ಪಕ್ಷ ಕೋಮುಗಲಭೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಈಗಲೇ ಹೇಳುವುದಿಲ್ಲ ಆದರೆ ಗಲಭೆಯ ಸಂಪೂರ್ಣ ಮಾಹಿತಿ ಸಿಕ್ಕ ನಂತರ ತಿಳಿಸುವುದಾಗಿ ಹೇಳಿದ್ದಾರೆ. ಲೋಕಸಭಾ ಚುನಾವಣೆಗಳ ಹಿನ್ನಲೆ ಇತರ ರಾಜ್ಯಗಳಲ್ಲೂ ಕೋಮುಗಲಭೆಗಳು ನಡೆಯುವ ಸಾಧ್ಯತೆ ಇರುವುದರಿಂದ 11 ರಾಜ್ಯಗಳ ಗೃಹ ಇಲಾಖೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement