ಅಗ್ನಿ-5 ಕ್ಷಿಪಣಿ 2ನೇ ಹಂತದ ಪರೀಕ್ಷೆಗೆ ಸಿದ್ಧತೆ
ಬಾಲಸೊರೆ(ಒಡಿಶಾ): ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ ಹೊಂದಿರುವ ಸ್ವದೇಶಿ ನಿರ್ಮಿತ ಅಗ್ನಿ-5 ಕ್ಷಿಪಣಿಯ ಎರಡನೇ ಹಂತದ ಪರೀಕ್ಷೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಮುಂದಾಗಿದೆ.
ಕ್ಷಿಪಣಿ ಪರೀಕ್ಷೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಂದುಕೊಂಡಂತೆ ಅನುಕೂಲ ವಾತಾವರಣ ಒದಗಿದರೆ ಸೆಪ್ಟೆಂಬರ್ 15 ರಂದು ಒಡಿಶಾದ ಕರಾವಳಿ ತೀರದಲ್ಲಿ ಅಗ್ನಿ-5 ಕ್ಷಿಪಣಿಯ ಎರಡನೇ ಹಂತದ ಪ್ರಯೋಗಾರ್ಥ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅಧಿಕಾರಯೊಬ್ಬರು ತಿಳಿಸಿದ್ದಾರೆ.
ಕ್ಷಿಪಣಿ ಪರೀಕ್ಷೆಗೂ ಮುನ್ನ ಕ್ಷಿಪಣಿಯಲ್ಲಿ ಬಳಸಿರುವ ಬ್ಯಾಟರಿ ಬ್ಯಾಕ್ಅಪ್ ಹಾಗೂ ನೆಟ್ವರ್ಕ್ಗೆ ಸಂಬಂಧಿಸಿದಂತೆ ಕೊನೆ ಹಂತದ ಪರೀಕ್ಷೆಗಳು ನಡೆಯುತ್ತಿದೆ. ಅಲ್ಲದೆ ಗುಣಮಟ್ಟದ ಕ್ಷಿಪಣಿ ತಯಾರಿಸಲಾಗಿದ್ದು, ಮೂರು ಹಂತಗಳಲ್ಲಿ ಸಿಡಿತಲೆಗಳನ್ನು ಸಿಡಿಸುವ ಸುಮಾರು 1 ಸಾವಿರ ಕೆ.ಜಿ ತೂಕ ಹೊರಬಲ್ಲ ಅಗ್ನಿ-5 ಕ್ಷಿಪಣಿ ಸುಮಾರು ಐದು ಸಾವಿರ ಕಿ.ಮೀ ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕೂ ಮುನ್ನ 2012ರಲ್ಲಿ ಒಡಿಶಾದ ಕರಾವಳಿ ತೀರದಲ್ಲಿ ಐದು ಸಾವಿರ ಕಿ.ಮೀ ದೂರ ಕ್ರಮಿಸಬಲ್ಲ ಅಗ್ನಿ-5 ಕ್ಷಿಪಣಿಯ ಮೊದಲ ಹಂತದ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.