ಇಂದಿನ ಸಂಸದೀಯ ಮಂಡಳಿ ಸಭೆಗೆ ಆಡ್ವಾಣಿಗಿಲ್ಲ ಆಹ್ವಾನ
ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರನ್ನು ಪಕ್ಕಕ್ಕಿಟ್ಟೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಪಟ್ಟ ..
ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರನ್ನು ಪಕ್ಕಕ್ಕಿಟ್ಟೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಪಟ್ಟ ಕಟ್ಟುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಈ ಸಂಬಂಧ ಇಂದು ಸಂಜೆ ನಡೆಯುವ ಪಕ್ಷದ ಸಂಸದೀಯ ಮಂಡಳಿ ಸಭೆಗೆ ಈವರೆಗೂ ಆಡ್ವಾಣಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಮೋದಿ ಆಯ್ಕೆ ವಿಚಾರದಲ್ಲಿ ಒಮ್ಮತ ಮೂಡಿಸಲು ಯತ್ನಿಸುತ್ತಿರುವ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಆಡ್ವಾಣಿ ಸೇರಿದಂತೆ ಅವರ ಬಣದ ನಾಯಕರ ಮನವೊಲಿಸುವ ಕಸರತ್ತು ನಡೆಸುತ್ತಿದ್ದಾರೆ. ಒಂದು ವೇಳೆ ಒಮ್ಮತ ಮೂಡದಿದ್ದರೆ ಆರ್ಎಸ್ಎಸ್ ಸೂಚನೆಯಂತೆ ತಮ್ಮ ಪರಮಾಧಿಕಾರವನ್ನು ಬಳಸಿ ಪ್ರಧಾನಿ ಅಭ್ಯರ್ಥಿನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.
ಇನ್ನು ಮೋದಿ ಆಯ್ಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಆಡ್ವಾಣಿ ಬಣದ ಸುಷ್ಮಾ ಸ್ವರಾಜ್ ಹಾಗೂ ಮುರುಳಿ ಮನೋಹರ್ ಜೋಶಿ ಅವರು ಸಂಸದೀಯ ಮಂಡಳಿ ಸಭೆಗೆ ಗೈರು ಆಗುವ ಸಾಧ್ಯತೆ ಇದೆ.
ಆಡ್ವಾಣಿಯಿಂದ ಹೊಸ ಷರತ್ತುಗಳು
ಮೋದಿ ಆಯ್ಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎಲ್.ಕೆ.ಆಡ್ವಾಣಿ ಅವರು, ಒಂದು ವೇಳೆ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವುದೇಯಾದರೆ, ಅವರು ಮೊದಲು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು, ಗುಜರಾತ್ನಲ್ಲಿ ಉಪ ಮುಖ್ಯಮಂತ್ರಿ ಆಯ್ಕೆ ಮಾಡಬೇಕು ಮತ್ತು ಮೋದಿ ದೆಹಲಿಯಲ್ಲೇ ಇರಬೇಕು ಎಂದು ಷರತ್ತು ವಿಧಿಸಿದ್ದಾರೆ.