ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದಿಲ್ಲಿ ಹತ್ಯಾಚಾರಿಗಳಿಗೆ ಗಲ್ಲು

ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ದೆಹಲಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.

Lingaraj Badiger
Updated On : 13 Sept 2013, 8:29 am

ನವದೆಹಲಿ: ದೆಹಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಅತ್ಯಂತ ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದ ನಾಲ್ವರು ವಯಸ್ಕ ಅಪರಾಧಿಗಳಿಗೆ ದೆಹಲಿ ಸಾಕೇತ್ ಕೋರ್ಟ್ ಶುಕ್ರವಾರ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಕಾಮುಕರಿಗೆ ಸಾವಿನ ಎಚ್ಚರಿಕೆ ರವಾನಿಸಿದೆ.

ಕಳೆದ ಬುಧವಾರ ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಅಪರಾಧಿಗಳ ಶಿಕ್ಷೆ ಪ್ರಮಾಣ ಕುರಿತು ವಾದ-ಪ್ರತಿವಾದ ಪೂರ್ಣಗೊಳಿಸಿದ್ದ ದೆಹಲಿ ತ್ವರಿತಗತಿ ನ್ಯಾಯಾಲಯ ತೀರ್ಪುನ್ನು ಇಂದಿಗೆ ಕಾಯ್ದಿರಿಸಿತ್ತು.

ಇಂದು ಮಧ್ಯಾಹ್ನ 2.30ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸಿದ ನ್ಯಾಯಾದೀಶ ಯೋಗೇಶ್ ಖನ್ನಾ ಅವರು, ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಯಲ್ಲಿ ಭಾಗಿಯಾದ ಎಲ್ಲಾ ಅಪರಾಧಿಗಳಿಗೂ ಗಲ್ಲು ಶಿಕ್ಷೆ ವಿಧಿಸುತ್ತಿರುವುದಾಗಿ ತಿಳಿಸಿದರು. ಅಲ್ಲದೆ ಇದು ಅಪರೂಪದಲ್ಲಿ ಅತ್ಯಂತ ಅಪರೂಪದ ಪ್ರಕರಣ. ಇಂತಹ ಪ್ರಕರಣಗಳಲ್ಲಿ ಸಮಾಜದಲ್ಲಿ ಕ್ಷಮೆಯಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಇಂದಿನಿಂದ 60 ದಿನದೊಳಗೆ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ನ್ಯಾ.ಯೋಗೇಶ್ ಖನ್ನಾ ಅವರು ದೆಹಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.

ಇನ್ನು ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಯುವತಿಯ ತಂದೆ, ನನ್ನ ಮಗಳಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ತೀರ್ಪು ಸ್ವಾಗತಿಸಿದ ಶಿಂಧೆ
ದೆಹಲಿ ಹತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವ ತ್ವರತಿಗತಿ ನ್ಯಾಯಾಲಯದ ತೀರ್ಪನ್ನು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಸ್ವಾಗತಿಸಿದ್ದಾರೆ. ಅತ್ಯಾಚಾರಕ್ಕೆ ಬಲಿಯಾದ ಯುವತಿಯ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ ಎಂದು ಹೇಳಿದ್ದಾರೆ.

ಇದು ಅಪರೂಪದಲ್ಲಿ ಅತ್ಯಂತ ಅಪರೂಪ ಪ್ರಕರಣ. ಹೀಗಾಗಿ ಗಲ್ಲು ಶಿಕ್ಷೆ ನೀಡಲಾಗಿದೆ. ಈ ತೀರ್ಪಿನಿಂದ ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ಘಟನೆಯ ತೀರ್ಪು ಮಂಗಳವಾರ ಪ್ರಕಟವಾಗಿತ್ತು. ಆದರೆ ಶಿಕ್ಷೆಯ ಪ್ರಮಾಣದ ಬಗ್ಗೆ ತೀವ್ರ ಕುತೂಹಲ ಮೂಡಿಸಿತ್ತು. ನಿರ್ಭಯಾಳ ಮೇಲೆ ಅತ್ಯಂತ ಕ್ರೂರವಾಗಿ ಅತ್ಯಾಚಾರವೆಸಗಿ ಅಟ್ಟಹಾಸಗೈದಿದ್ದ ಪಾತಕಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಕೂಗು ದೇಶಾದ್ಯಂತ ಕೇಳಿಬಂದಿತ್ತು. ಕಡೆಗೂ ಮೃತ ಯುವತಿ ಹಾಗೂ ಕುಟುಂಬದವರ ಆಸೆ ಈಡೇರಿದ್ದು, ಡಿಸೆಂಬರ್ 16ರಂದು ದೆಹಲಿಯಲ್ಲಿ 23 ವರ್ಷದ ಅರೆವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಸಾವಿಗೆ ಕಾರಣರಾದ ದುಷ್ಟರಿಗೆ ಕೋರ್ಟ್ ಉಗ್ರ ಶಿಕ್ಷೆ ನೀಡಿದೆ.

ಭಾರತದಲ್ಲಿ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯಗಳು ಮರಣದಂಡನೆ ವಿಧಿಸುತ್ತವೆ. ಅಪರಾಧಿಗಳಾದ ಮುಖೇಶ್ ಸಿಂಗ್, ಅಕ್ಷಯ್ ಸಿಂಗ್, ವಿನಯ್ ಶರ್ಮ ಮತ್ತು ಪವನ್ ಗುಪ್ತ ವಿರುದ್ಧ  ಅತ್ಯಾಚಾರ, ಕೊಲೆ,  ಅಪಹರಣ, ಕೊಲೆ ಯತ್ನ, ಸಾಕ್ಷ್ಯನಾಶ ಸೇರಿದಂತೆ 14 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಎಲ್ಲಾ ಪ್ರಕರಣಗಳಲ್ಲೂ ನಾಲ್ವರ ಆರೋಪಗಳು ಸಾಬೀತಾಗಿವೆ. ಸಾಯುವ ಮುನ್ನ ನಿರ್ಭಯಾ ನೀಡಿದ ಹೇಳಿಕೆ, ಆತನ ಗೆಳೆಯ ನೀಡಿದ ಸಾಕ್ಷ್ಯ, ಇತರ 85 ಮಂದಿ ಸಾಕ್ಷಿಗಳು, ಡಿಎನ್‌ಎ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮತ್ತು ವಿದ್ಯುನ್ಮಾನ ಸಾಕ್ಷಿಗಳು ಆರೋಪಿಗಳ ಅಪರಾಧವನ್ನು ಸಾಬೀತು ಮಾಡಿವೆ ಎಂದು ನ್ಯಾಯಾಲಯ ಹೇಳಿದೆ.

ಏನಾಗಿತ್ತು ಅಂದು?: ಡಿಸೆಂಬರ್ 16ರಂದು ರಾತ್ರಿ ದಕ್ಷಿಣ ದೆಹಲಿಯ ಮುನಿರ್ಕಾದಲ್ಲಿ ತನ್ನ ಗೆಳೆಯನೊಂದಿಗೆ ದ್ವಾರಕಕ್ಕೆ ತೆರಳಬೇಕಿದ್ದ 'ನಿರ್ಭಯಾ' ಖಾಸಗಿ ಬಸ್ ಹತ್ತಿದ್ದಳು. ಚಾಲಕ ಸೇರಿದಂತೆ ಆರು ಮಂದಿ ಚಲಿಸುತ್ತಿದ್ದ ಬಸ್ನಲ್ಲಿ ನಿರ್ಭಯಾಳ ಗೆಳೆಯನಿಗೆ ಥಳಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ನಿರ್ಭಯಾಳ ದೇಹಕ್ಕೆ ಕಬ್ಬಿಣದ ರಾಡ್ ತೂರಿಸಿ ಆಕೆಯ ಕರಳನ್ನು ಹೊರಗೆಳೆದು ಅಮಾನುಷವಾಗಿ ವರ್ತಿಸಿದ್ದರು. ಅರೆಪ್ರಜ್ಞಾವಸ್ಥೆಯಲ್ಲಿದ್ದ ನಿರ್ಭಯಾ ಮತ್ತು ಆಕೆಯ ಗೆಳೆಯನನ್ನು ಅರೆಬೆತ್ತಲುಗೊಳಸಿ ಬಸ್ನಿಂದ ತಳ್ಳಿ ಹೋಗಿದ್ದರು. ಎರಡು ವಾರಗಳ ಕಾಲ ಸಾವಿನೊಡನೆ ಸೆಣಸಿದ ನಿರ್ಭಯಾ ಸಿಂಗಾಪೂರ್ ಆಸ್ಪತ್ರೆಯಲ್ಲಿ ಡಿಸೆಂಬರ್ 29ರಂದು ಕೊನೆಯುಸಿರೆಳೆದಿದ್ದಳು.

ಒಬ್ಬ ಅಪರಾಧಿ ಆತ್ಮಹತ್ಯೆ: ಆಕೆಯ ಸಾವಿನೊಂದಿಗೆ ರಾಷ್ಟ್ರಾದ್ಯಂತ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಂಡಿದ್ದವು. ಈ ಘೋರ ಅಪರಾಧದಲ್ಲಿ ಭಾಗಿಯಾಗಿದ್ದ ಆರು ಮಂದಿ ಪೈಕಿ ಪ್ರಮುಖ ಆರೋಪಿ ರಾಮ್ ಸಿಂಗ್ ತಿಹಾರ್ ಜೈಲ್ನಲ್ಲಿ ಮಾ.11ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಮತ್ತೊಬ್ಬ ಬಾಲಾಪರಾಧಿ ಆದ್ದರಿಂದ ಆತನನ್ನು ಬಾಲ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲಾಗಿದ್ದು, ಅತ್ಯಾಚಾರ ಮತ್ತು ಕೊಲೆ ಆರೋಪ ಸಾಬೀತಾಗಿದೆ. ಬಾಲ ನ್ಯಾಯಾಲಯದಡಿ ನೀಡಬಹುದಾದ ಅತಿ ಹೆಚ್ಚಿನ ಶಿಕ್ಷೆಯನ್ನು ನೀಡಲಾಗಿದೆ. ಬಾಲಾಪರಾಧಿ ಈಗ ಪರಿವರ್ತನಾ ಕೇಂದ್ರದಲ್ಲಿದ್ದಾನೆ.

ಡಿಸೆಂಬರ್ 17- 20: ಪ್ರಮುಖ ಆರೋಪಿ ಬಸ್ ಚಾಲಕ ರಾಮ್ ಸಿಂಗ್, ಆತನ ಸಹೋದರ ಮುಖೇಶ್ ಸಿಂಗ್ನನ್ನು ರಾಜಾಸ್ಥಾನದಲ್ಲಿ ಬಂಧಿಸಲಾಯಿತು. ವಿನಯ ಶರ್ಮ ಮತ್ತು ಪವನ್ ಗುಪ್ತ ಮತ್ತೊಬ್ಬ ಬಾಲಾಪರಾಧಿಯನ್ನು ದೆಹಲಿಯಲ್ಲಿ ಬಂಧಿಸಲಾಯಿತು. ಅಕ್ಷಯ್ನನ್ನು ಔರಂಗಾಬಾದ್ನಲ್ಲಿ ಬಂಧಿಸಲಾಯಿತು. ಆರೋಪಿ ವಿನಯ್ ಶರ್ಮ ನ್ಯಾಯಾಲಯದಲ್ಲಿ ತಾನು ಘೋರ ತಪ್ಪೆಸಗಿದ್ದೇನೆ, ತನನ್ನು ಗಲ್ಲಿಗೆ ಏರಿಸಿ ಎಂದು ಕೋರಿಕೊಂಡಿದ್ದ.

ಪವನ್ ಗುಪ್ತ
ನಿರ್ಭಯಾ ಮತ್ತು ಆಕೆಯ ಗೆಳೆಯನ ಮೇಲೆ ಹಲ್ಲೆ ಮಾಡಿದ್ದ. ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದ್ದ ನಂತರ ಇಬ್ಬರನ್ನೂ ಬಸ್ನಿಂದ ಆಚೆಗೆ ಎಸೆಯಲು ನೆರವಾಗಿದ್ದ.

ಮುಖೇಶ್ ಸಿಂಗ್
ನಿರ್ಭಯಾ, ಆಕೆಯ ಗೆಳೆಯನ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಮಾಡಿದ್ದ. ನಂತರ ಸಾಕ್ಷಿಗಳನ್ನು ನಾಶಪಡಿಸಲು ಯತ್ನಿಸಿದ್ದ.

ವಿನಯ್ ಶರ್ಮ
ನಿರ್ಭಯಾಳ ಗೆಳೆಯನ ಮೇಲೆ ದಾರುಣ ಹಲ್ಲೆ ನಡೆಸಿದ್ದ, ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದ್ದ. ತನ್ನ ಸಹಚರ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡುವಾಗ ನಿರ್ಭಯಾ ಗೆಳೆಯನನ್ನು ಹಿಡಿದಿದ್ದ.

ಅಕ್ಷಯ್ ಸಿಂಗ್
ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದ.

ರಾಮ್ಸಿಂಗ್
ನಿರ್ಭಯಾ ಮತ್ತು ಆಕೆಯ ಗೆಳೆಯನ ಮೇಲೆ ಹಲ್ಲೆ ನಡೆಸಿದ್ದ. ನಂತರ ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದ್ದ. (ಪ್ರಮುಖ ಆರೋಪಿಯಾಗಿದ್ದ ರಾಮ್ಸಿಂಗ್ ತಿಹಾರ್ ಜೈಲ್ನಲ್ಲಿ ಮಾರ್ಚ್ 11 ರಂದು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.)

ಬಾಲಾಪರಾಧಿ
ದಾರುಣ ಅತ್ಯಾಚಾರ ನಡೆಸಿದ್ದಲ್ಲದೇ, ಕಬ್ಬಿಣದ ರಾಡನ್ನು ದೇಹಕ್ಕೆ ತೂರಿಸಿ ಆಕೆಯ ಕರುಳನ್ನು ಹೊರಗೆಳೆದಿದ್ದ. ಆಗಸ್ಟ್ 31ರಂದು ಬಾಲಾಪರಾಧಿಗಳ ನ್ಯಾಯಾಲಯವು ಆತನಿಗೆ ಮೂರು ವರ್ಷ ಶಿಕ್ಷೆ ವಿಧಿಸಿ ಪರಿವರ್ತನಾ ಕೇಂದ್ರಕ್ಕೆ ರವಾನಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement