ಮುಜಾಫರ್‌ನಗರ ಕೋಮುಗಲಭೆ: 43 ಸಾವಿರ ನಿರಾಶ್ರಿತರು
ಮುಜಾಫರ್‌ನಗರ್: ಮುಜಾಫರ್‌ನಗರದಲ್ಲಿ ಉಂಟಾಗಿದ್ದ ಕೋಮುಗಲಭೆಯಿಂದಾಗಿ ಸುಮಾರು 43 ಸಾವಿರ ಮಂದಿ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಎಂದು ಜಿಲ್ಲಾಡಳಿತ ಶುಕ್ರವಾರ ಹೇಳಿದೆ.
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಒಂದು ವಾರದಿಂದ ಭುಗಿಲೆದಿದ್ದ ಕೋಮುಗಲಭೆಯ ಕಿಡಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಇಂದು ಜಿಲ್ಲಾಡಳಿತ 12 ಗಂಟೆಗಳ ಕಾಲ ಕರ್ಫೂವನ್ನು ಸಡಿಲಿಸಿದೆ.
ಕೋಮುಗಲಭೆಯ ಉದ್ವಿಗ್ನತೆಯಿಂದ ಜನರು ಹೊರ ಬರುತ್ತಿದ್ದು, ತಮ್ಮ ದಿನ ನಿತ್ಯದ ಕಾರ್ಯಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ಇಂದು ಬೆಳಿಗ್ಗೆ ಏಳು ಗಂಟೆಯಿಂದ ರಾತ್ರಿ ಏಳು ಗಂಟೆಯವರೆಗೆ ಕರ್ಫೂ ಸಡಿಲಿಸಲಾಗಿದೆ. ಅಲ್ಲದೆ ಪರಿಸ್ಥಿತಿ ತಿಳಿಗೊಂಡರೆ ಕರ್ಫೂವನ್ನು ಸಂಪೂರ್ಣವಾಗಿ ಹಿಂಪಡೆಯಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಎರಡು ಕೋಮುಗಳ ನಡುವಿನ ಘರ್ಷಣೆಯಿಂದ ಭೀತರಾಗಿದ್ದ ಜನತೆ ಹೊರಗೆ ಬರದೆ ಮನೆಯಲ್ಲೆ ಉಳಿದಿದ್ದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಜಿಲ್ಲಾಡಳಿತ ಸಹ ಕರ್ಫೂ ಜಾರಿಮಾಡಿತ್ತು. ಇದರಿಂದಾಗಿ ಜನರ ಓಡಾಟವಿಲ್ಲದೆ ರಸ್ತೆಗಳು ಬಣಗುಡುತ್ತಿದ್ದವು. ಇಂದು ಎಂದಿನಂತೆ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ.
ಗಲಭೆಯಿಂದಾಗಿ ನಿರಾಶ್ರಿತರಾಗಿರುವ ಜನರಿಗೆ ಜಿಲ್ಲಾಡಳಿತ 38 ಪುರ್ನವಸತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಜನರು ನಿರಾಶ್ರಿತ ಕೇಂದ್ರಗಳಲ್ಲಿ ವಸತಿ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ ಅಧಿಕಾರಗಳ ಪ್ರಕಾರ ಸುಮಾರು ಹತ್ತು ಸಾವಿರ ಜನರು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಮುಜಾಫರ್‌ನಗರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಗಲಭೆಯಿಂದಾಗಿ ಇಲ್ಲಿಯವರಗೆ ಸುಮಾರು 43 ಜನರು ಪ್ರಾಣ ಕಳೆದುಕೊಂಡಿದ್ದರು.