ರಾಜ್ಯಗಳಲ್ಲಿ ಕೃಷಿ ಉತ್ಪನ್ನ ಅಭಿವೃದ್ದಿಗೆ ನೆರವು: ಪ್ರಧಾನಿ
ನವದೆಹಲಿ: ಆಹಾರ ಉತ್ಪನ್ನಗಳ ಅಭಿವೃದ್ದಿಗೆ ಮುಂದಾಗಿರುವ ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ಕೃಷಿ ಉತ್ಪನ್ನ ಅಭಿವೃದ್ದಿಗೆ ನೆರವು ನೀಡಲಾಗುವುದು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
ಇಂದು ಗುಜರಾತ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ರೈತರ ಕೃಷಿಮೇಳದಲ್ಲಿ ಭಾಗವಹಿಸಿದ್ದ ಪ್ರಧಾನಿ, ರಾಜ್ಯಗಳಲ್ಲಿ ಆಹಾರ ಉತ್ಪನ್ನಗಳ ಅಭಿವೃದ್ದಿಗೆ ಪೂರಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ದೇಶದಲ್ಲಿ ದ್ವಿಮುಖವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಆಹಾರ ಉತ್ಪನ್ನಗಳು ಹಾಗೂ ಇನ್ನಿತರ ದವಸ ಧಾನ್ಯಗಳ ಪೂರೈಕೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ಭಾರತದಲ್ಲಿನ ಬಹುತೇಕ ರೈತರು ಆಹಾರ ಉತ್ಪನ್ನಗಳನ್ನು ಬೆಳೆಯಲು ಮುಂಗಾರು ಮಳೆಯನ್ನೆ ನಂಬಿಕೊಂಡಿರುವುದು ಕೃಷಿ ಅಭಿವೃದ್ದಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಹಿ ಹಾಕಿದ್ದು, ದೇಶದ ಮೂರನೇ ಒಂದು ಭಾಗದ ಜನರಿಗೆ ಆಹಾರದ ಹಕ್ಕು ನೀಡುವ ಮಸೂದೆ ಕಾನೂನಾಗಿ ಪರಿವರ್ತನೆಗೊಂಡಿದೆ. ಇನ್ನು ಮುಂದೆ ದೇಶದ ಜನತೆಗೆ ಆಹಾರ ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಹೀಗಾಗಿ ಪ್ರತಿಯೊಂದು ರಾಜ್ಯದಲ್ಲೂ ಆಹಾರ ಉತ್ಪನ್ನಗಳನ್ನು ಬೆಳೆಯಲು ಅಗತ್ಯ ನೆರವು ನೀಡಲಾಗುವುದು ಎಂದರು.
ಇದೇ ವೇಳೆ, ದೇಶದ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆಳೆಗಳನ್ನು ಬೆಳೆಯಲು ರೈತರಿಗೆ ಜಾಗದ ಕೊರತೆ ಇದೆ, ಮಳೆಯನ್ನೆ ನಂಬಿರುವ ರೈತರು ಸಕಾಲದಲ್ಲಿ ಮಳೆಯಾಗದಿದ್ದರೆ ಬೆಳೆ ನಾಶಹೊಂದುವುದು, ಸಮಯಕ್ಕೆ ಸರಿಯಾಗಿ ಕೂಲಿ ಆಳುಗಳು ಸಿಗದೆ ಇರುವುದು ಸಹ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಕಳೆದ ಐದು ವರ್ಷಗಳಿಂದ ಯುಪಿಎ ಸರ್ಕಾರದ ಆಹಾರ ಉತ್ಪನ್ನಗಳ ಅಭಿವೃದ್ದಿಗೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ದೇಶದಲ್ಲಿ ಹಣ್ಣುಗಳು ಹಾಗೂ ತರಕಾರಿಗಳನ್ನು ನಿರಂತರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.