ಸೂಕ್ತ ಮಾಹಿತಿ ನೀಡದಿದ್ರೆ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಿ: ಸುಪ್ರೀಂ
ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯು ತನ್ನ ಆಸ್ತಿ ಹಾಗೂ ಅಪರಾಧಿಕ ಹಿನ್ನೆಲೆಯ ಬಗ್ಗೆ ಸೂಕ್ತ ಮಾಹಿತಿ..
ನವದೆಹಲಿ: ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯು ತನ್ನ ಆಸ್ತಿ ಹಾಗೂ ಅಪರಾಧಿಕ ಹಿನ್ನೆಲೆಯ ಬಗ್ಗೆ ಸೂಕ್ತ ಮಾಹಿತಿ ನೀಡದಿದ್ದರೆ ಅಂತಹ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.
ಎನ್ಜಿಒ ರಿಸರ್ಜಂಟ್ ಇಂಡಿಯಾ ಸಲ್ಲಿಸಿದ್ದ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಸದಾಶಿವಂ ಅವರನ್ನೊಳಗೊಂಡ ಸುಪ್ರೀಂ ಪೀಠ, ನಾಪತ್ರದಲ್ಲಿ ಅಭ್ಯರ್ಥಿಯು ತನ್ನ ಆಸ್ತಿ ಮತ್ತು ಅಪರಾಧಿಕ ಹಿನ್ನೆಲೆಯ ಸಂಪೂರ್ಣ ವಿವರ ನೀಡದಿದ್ದರೆ, ಆ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸುವ ಅಧಿಕಾರ ಚುನಾವಣಾ ಅಧಿಕಾರಿಗೆ ಇದೆ ಎಂದು ಹೇಳಿದೆ.
ಚುನಾವಣೆ ವೇಳೆ ಹಲವು ಅಭ್ಯರ್ಥಿಗಳು ಆಸ್ತಿ ವಿವರ ಹಾಗೂ ಅಪರಾಧ ಮಾಹಿತಿ ನೀಡಬೇಕಾದ ಕಾಲಂ ಅನ್ನು ಖಾಲಿ ಬಿಟ್ಟಿರುತ್ತಾರೆ. ಇದರಿಂದ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದಂತಾಗುತ್ತದೆ. ಹೀಗಾಗಿ ಅಂತಹ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಬೇಕು ಎಂದು ರಿಸರ್ಜಂಟ್ ಇಂಡಿಯಾ ಮನವಿ ಮಾಡಿತ್ತು.