ಒಡಿಶಾ: 14 ನಕ್ಸಲರ ಬಲಿ
ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯ ಅರಣ್ಯ ವಲಯದಲ್ಲಿ ಭದ್ರತಾ ಪಡೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 14 ನಕ್ಸಲರನ್ನು...
ಭುವನೇಶ್ವರ: ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯ ಅರಣ್ಯ ವಲಯದಲ್ಲಿ ಭದ್ರತಾ ಪಡೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 14 ಮಂದಿ ನಕ್ಸಲರನ್ನು ಎನ್‌ಕೌಂಟರ್ ಮಾಡಿದ್ದಾರೆ.
ನಕ್ಸಲ್ ದಮನಕ್ಕೆ ಮುಂದಾಗಿರುವ ವಿಶೇಷ ಕಾರ್ಯಾಚರಣೆ ಪಡೆ(ಎಸ್‌ಒಜಿ) ಹಾಗೂ ಜಿಲ್ಲೆಯ ಗ್ರಾಮ ಪಡೆ(ಡಿವಿಜಿ) ಮಲ್ಕನ್‌ಗಿರಿ ಜಿಲ್ಲೆಯ ಸಮೀಪದ ಅರಣ್ಯ ವಲಯದಲ್ಲಿ ಜಂಟಿ ಕಾರ್ಯಚರಣೆ ನಡೆಸಿ, ಓರ್ವ ಮಹಿಳೆ ಸೇರಿದಂತೆ 14 ಮಂದಿ ನಕ್ಸಲರನ್ನು ಹತ್ಯೆ ಮಾಡಿದ್ದಾರೆ.
ಛತ್ತೀಸ್‌ಗಡದ ಗಡಿಯಲ್ಲಿ ನಕ್ಸಲರು ಬೀಡು ಬಿಟ್ಟಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಭದ್ರತಾ ಪಡೆಯ ಸಿಬ್ಬಂದಿ ಜೊತೆ ಕಾರ್ಯಾಚರಣೆಗೆ ಮುಂದಾದರು. ಈ ವೇಳೆ, ಭದ್ರತಾ ಪಡೆ ಸಿಬ್ಬಂದಿ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಕಾರ್ಯಾಚರಣೆಯಲ್ಲಿ 14 ಮಂದಿ ನಕ್ಸಲರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಸ್ಪಪ್ಟಪಡಿಸಿದ್ದಾರೆ. ಅಲ್ಲದೆ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಯ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಮೇ 25ರಂದು ಛತ್ತೀಸ್‌ಗಡದ ದಾರ್ಬಾದಲ್ಲಿ ಜಿಲ್ಲೆಯ ಕಾಂಗ್ರೆಸ್ ಹಿರಿಯ ನಾಯಕರ ಮೇಲೆ ನಡೆದ ದಾಳಿಯಲ್ಲಿ ಈ ನಕ್ಸಲರು ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ದಾಳಿಯಲ್ಲಿ ಮೃತಪಟ್ಟ ನಕ್ಸಲರ ಮೃತದೇಹಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಅಪಾರ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.