ಗಡಿ ವಿವಾದ ಜಟಿಲ ಸಮಸ್ಯೆಯೇನಲ್ಲ: ಖುರ್ಷಿದ್
ಭಾರತ - ಚೀನಾ ಗಡಿ ವಿವಾದ ಜಟಿಲ ಸಮಸ್ಯೆಯೇನಲ್ಲ. ಅಂತಹ ಸಮಸ್ಯೆಗಳನ್ನು ಉತ್ತಮ ಬಾಂಧವ್ಯದಿಂದಲೇ ನಿರ್ಮೂಲನೆ...
ನವದೆಹಲಿ: ಭಾರತ - ಚೀನಾ ಗಡಿ ವಿವಾದ ಜಟಿಲ ಸಮಸ್ಯೆಯೇನಲ್ಲ. ಅಂತಹ ಸಮಸ್ಯೆಗಳನ್ನು ಉತ್ತಮ ಬಾಂಧವ್ಯದಿಂದಲೇ ನಿರ್ಮೂಲನೆ ಮಾಡಲು ಉಭಯ ರಾಷ್ಟ್ರಗಳು ಬದ್ಧವಾಗಿವೆ ಎಂದು ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಸೋಮವಾರ ಹೇಳಿದ್ದಾರೆ.
ನವದೆಹಲಿಯಲ್ಲಿಂದು ಭಾರತ-ಚೀನಾ ಮಾಧ್ಯಮ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಭಯ ರಾಷ್ಟ್ರಗಳ ನಡುವೆ ಅಸ್ಪಷ್ಟ ಗಡಿಗಳು ಇರುವುದು ನಿಜ. ಹೀಗಾಗಿ ಅವುಗಳನ್ನು ಗುರುತಿಸುವಲ್ಲಿ ಆಗುತ್ತಿರುವ ವ್ಯತ್ಯಾಸಗಳು ಜಟಿಲ ಸಮಸ್ಯೆಯಾಗಿ ಕಾಣಿಸುತ್ತಿದೆ. ಆದರೆ ಅದು ನಿಜಕ್ಕೂ ಜಟಿಲ ಸಮಸ್ಯೆಯಲ್ಲ ಎಂಬುದು ನಮ್ಮ ಮನಕ್ಕೆ ಬಂದಿದೆ. ಮಾತುಕತೆಯ ಮೂಲಕವೇ ಇಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಖುರ್ಷಿದ್ ತಿಳಿಸಿದರು.
ಅಲ್ಲದೆ, 21ನೇ ಶತಮಾನವನ್ನು ಏಷ್ಯಾದ ಶತಮಾನ ಎಂದೇ ಹೇಳಲಾಗುತ್ತಿದೆ. ಆದರೆ ಜಾಗತಿಕ ಸಮಸ್ಯೆಗಳಿಗೆ ಭಾರತ ಹಾಗೂ ಚೀನಾ ಸಮಾನ ಉತ್ತರ ಕಂಡುಕೊಳ್ಳುವಲ್ಲಿ ವಿಫಲವಾದರೆ ಆ ಕನಸು ಅಪೂರ್ಣ ಎಂಬುದು ನಮ್ಮ ಬಲವಾದ ನಂಬಿಕೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಚೀನಾ ಸೇನೆ ನಡೆಸುತ್ತಿರುವ ಅತಿಕ್ರಮಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಸರ್ಕಾರ ಈಗಾಗಲೇ ಸಂಸತ್ತಿನ ಒಳಗೆ ಹಾಗೂ ಹೊರಗೆ ತನ್ನ ನಿಲುವನ್ನು ತಿಳಿಸಿದೆ.
ಇದೇ ವೇಳೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚೀನಾದ ವಾರ್ತಾ ಸಚಿವ ಕೇಯ್ ಮಿಂಗ್ಚಾವೊ ಮಾತನಾಡಿ, ತಮ್ಮ ನಡುವಣ ಸಕಾರಾತ್ಮಕ ಬೆಳವಣಿಗೆಗಳ ಬಗ್ಗೆ ಉಭಯ ದೇಶಗಳು ಹೆಚ್ಚಾಗಿ ಗಮನಹರಿಸಬೇಕು ಎಂದರು.