ಡ್ರೆಸ್‌ಕೋಡ್‌ಗೆ ಸರ್ಕಾರಿ ನೌಕರರ ಸಂಘ ವಿರೋಧ
ಸರ್ಕಾರಿ ನೌಕರರಿಗೆ ವಸ್ತ್ರ ಸಂಹಿತೆ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ನಿರ್ಧಾರ ಇದೀಗ ವಿವಾದಕ್ಕಿಡಾಗಿದ್ದು,
ಬೆಂಗಳೂರು: ಸರ್ಕಾರಿ ನೌಕರರಿಗೆ ವಸ್ತ್ರ ಸಂಹಿತೆ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ನಿರ್ಧಾರ ಇದೀಗ ವಿವಾದಕ್ಕಿಡಾಗಿದ್ದು, ಸರ್ಕಾರದ ಹೊಸ ನಿಯಮಕ್ಕೆ ಸರ್ಕಾರಿ ನೌಕರರ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಡ್ರೆಸ್‌ಕೋಡ್ ಆದೇಶವನ್ನು ತಕ್ಷಣವೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ನರಸಿಂಹಯ್ಯ ಅವರು ಸೋಮವಾರ ಹೇಳಿದ್ದಾರೆ.
ಇನ್ನು ಸರ್ಕಾರದ ಈ ನಿರ್ಧಾರ ಮಿಲಿಟರಿ ಆಡಳಿತ ತರುವ ಮುನ್ಸೂಚನೆ ಎಂದಿರುವ ವಾಟಾಳ್ ನಾಗರಾಜ್ ಅವರು, ಡ್ರೆಸ್‌ಕೋಡ್ ವಿರೋಧಿಸಿ ವಿಧಾನಸೌಧದ ಮುಂದೆ ಕಂಬಳಿ ಹೊದ್ದು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿಸ್ತಿಗಾಗಿ ಡ್ರೆಸ್‌ಕೋಡ್: ಸಿಎಂ
ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಿಸ್ತಿಗಾಗಿ ಡ್ರೆಸ್‌ಕೋಡ್ ಜಾರಿಗೆ ತರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಚೇರಿಗಳಿಗೆ ಬರುವ ನೌಕರರು ಸಭ್ಯ ಉಡುಗೆ ಧರಿಸಿಯೇ ಬರಬೇಕು ಎಂದು ಕಳೆದ ಶನಿವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿತ್ತು.
ಪುರುಷರು ಪ್ಯಾಂಟ್, ಷರ್ಟ್, ಕುರ್ತಾ, ಪೈಜಾಮ, ಮಹಿಳೆಯರು ಸೀರೆ, ಚೂಡಿದಾರ ಧರಿಸಿ ಬರಬೇಕು. ಪುರುಷರು ಟೀ ಷರ್ಟ್ ಧರಿಸುವಂತಿಲ್ಲ. ಅದೇ ರೀತಿ ಮಹಿಳೆಯರು ಸ್ಕರ್ಟ್, ಟೀ ಷರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ ಎನ್ನುತ್ತದೆ ಈ ವಸ್ತ್ರಸಂಹಿತೆ. ಅದೇ ರೀತಿ ಡಿ ದರ್ಜೆ ನೌಕರರು ಸಮವಸ್ತ್ರ ಧರಿಸಿ ಬರುವುದು ಕೂಡ ವಸ್ತ್ರಸಂಹಿತೆಯಲ್ಲಿ ಕಡ್ಡಾಯ ಮಾಡಲಾಗಿದೆ.