ಬಿಜೆಪಿಯ 'ಉಕ್ಕಿನ ಮನುಷ್ಯ' ತೆರೆಮರೆಗೆ: ನಿತೀಶ್
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುವುದರ ಮೂಲಕ ಬಿಜೆಪಿಯ...
ಪಾಟ್ನಾ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುವುದರ ಮೂಲಕ ಬಿಜೆಪಿಯ 'ಉಕ್ಕಿನ ಮನುಷ್ಯ' ಎಲ್.ಕೆ ಆಡ್ವಾಣಿ ಅವರು ತೆರೆಮರೆಗೆ ಸರಿದಂತಾಗಿದೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ವಿಷಾದ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಹಿರಿಯ ನಾಯಕ ಎಲ್.ಕೆ ಆಡ್ವಾಣಿ ಅವರು ರಾಜಕೀಯವಾಗಿ ತೆರೆಮರೆಗೆ ಸರಿದಂತಾಗಿದೆ ಎಂದು ತಿಳಿಸಿದರು. ಅಲ್ಲದೆ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮಾಡಿರುವ ಬಿಜೆಪಿಗೆ ಇದರಿಂದ ಯಾವುದೇ ಲಾಭವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಬೀಗುತ್ತಿರುವ ಬಿಜೆಪಿ ಮನೆಯಲ್ಲಿ ಮಾತ್ರ ಸಂತಸದ ವಾತವರಣ ಇರಬಹುದು. ಆದರೆ ಜನತೆ ಮೋದಿ ಆಯ್ಕೆಯನ್ನು ವಿರೋಧಿಸಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಇದೇ ವೇಳೆ, ಒಂದೆಡೆ ಪಕ್ಷದ ಉನ್ನತ್ತಿಗೆ ಶ್ರಮಿಸಿದ್ದ ಓರ್ವ ಉಕ್ಕು ಮನುಷ್ಯ ರಾಜಕೀಯದಿಂದ ಹಿಂದೆ ಸರಿದಿದ್ದು, ಮತ್ತೊಂದೆಡೆ ದೇಶದ ಜನತೆಯಿಂದ ಉಕ್ಕು ಸಂಗ್ರಹಿಸಿ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಸ್ಮಾರಕ ಕಟ್ಟಲು ಮುಂದಾಗಿರುವ ಮೋದಿ ಕಾರ್ಯದ ವಿರುದ್ಧ ಕಿಡಿಕಾರಿದರು.
ಜನತೆಯ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಜನತಾ ದರ್ಶನ (ಜನತಾ ಕೇ ದರ್ಬಾರ್ ಮೇ ಮುಖ್ಯಮಂತ್ರಿ) ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೋದಿ ಅವರನ್ನು ಬಿಜೆಪಿಯ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದ ಬಿಜೆಪಿಯ ಕ್ರಮವನ್ನು ಖಂಡಿಸಿದ್ದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಎನ್‌ಡಿಎ ಮೈತ್ರಿಕೂಟದಿಂದ ಹೊರ ನಡೆದಿದ್ದರು.