ಮುಜಾಫರ್ನಗರ ಗಲಭೆ: ಸರ್ಕಾರದ ವಿರುದ್ಧ ಮಾಯಾ ಕಿಡಿ
ಗಲಭೆ ಪೀಡಿತ ಮುಜಾಫರ್ನಗರಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರದ್ದು ಕಣ್ಣೊರೆಸುವ ತಂತ್ರ...
ನವದೆಹಲಿ: ಗಲಭೆ ಪೀಡಿತ ಮುಜಾಫರ್ನಗರಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರದ್ದು ಕಣ್ಣೊರೆಸುವ ತಂತ್ರ ಎಂದು ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ದ ಮುಖ್ಯಸ್ಥೆ ಮಯಾವತಿ ಸೋಮವಾರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೋಮುಗಲಭೆಯ ಸಂದರ್ಭದಲ್ಲಿ ಗಲಭೆಯನ್ನು ಹತ್ತಿಕ್ಕಲಾಗದ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಗಲಭೆಯ ವೇಳೆ ಸರ್ಕಾರ ಕೈಲಾಗದ ಹೇಡಿಯಂತೆ ಕಣ್ಮುಚ್ಚಿ ಕುಳಿತ್ತಿದ್ದು, ಇದೀಗ ಗಲಭೆ ಪೀಡಿದ ಪ್ರದೇಶಕ್ಕೆ ಭೇಟಿ ನೀಡಿ, ಹೇಳಿಕೆಗಳನ್ನು ನೀಡಿದಾಕ್ಷಣ ಗಲಭೆಯ ದಳ್ಳುರಿಯಲ್ಲಿ ಬೆಂದ ಸಂತ್ರಸ್ಥರಿಗೆ ನ್ಯಾಯ ಸಿಕ್ಕಂತಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಮುಗಲಭೆ ಸಂದರ್ಭದಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದ ಸರ್ಕಾರ ಇದ್ದರು ಒಂದೇ, ಇಲ್ಲದಿದ್ದರು ಒಂದೇ, ಹೀಗಾಗಿ ಸರ್ಕಾರವನ್ನು ವಜಾಗೊಳಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಮಾಯವತಿ ಆಗ್ರಹಿಸಿದರು. ಅಲ್ಲದೆ ಒಂದು ವಾರದ ನಂತರ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿರುವ ಅಖಿಲೇಶ್ ಯಾದವ್, ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ. ಸಿಎಂ ಭೇಟಿ ನೀಡಿ, ಭರವಸೆಗಳನ್ನು ನೀಡಿದ ತಕ್ಷಣ ಸಂತ್ರಸ್ಥರಿಗೆ ನ್ಯಾಯ ಸಿಕ್ಕಂತಾಗುವುದಿಲ್ಲ ಎಂದು ಆರೋಪಿಸಿದರು.
ಯುವತಿಯೊಬ್ಬಳನ್ನು ಯುವಕರ ಗುಂಪೊಂದು ರೇಗಿಸಿದ ಪರಿಣಾಮ ಮುಜಾಫರ್ನಗರದ ಕಾವಲಿ ಎಂಬಲ್ಲಿ ಎರಡು ಸಮುದಾಯಗಳ ನಡುವೆ ಕೋಮುಗಲಭೆ ಉಂಟಾಗಿತ್ತು. ಈ ಗಲಭೆಯ ದಳ್ಳುರಿಗೆ ಸುಮಾರು 45 ಮಂದಿ ಬಲಿಯಾಗಿದ್ದಾರೆ. ಅಲ್ಲದೆ ಗಲಭೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದು, ಸುಮಾರು 43 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ.