64ನೇ ಜನ್ಮದಿನ ಆಚರಿಸಿಕೊಂಡ ಮೋದಿ
ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ 64ನೇ ಜನ್ಮದಿನವನ್ನು ಆಚರಿಸಿಕೊಂಡರು.
ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ 64ನೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.
ಜನ್ಮದಿನದ ನಿಮಿತ್ತ ಇಂದು ಬೆಳಗ್ಗೆ ನರೇಂದ್ರ ಮೋದಿ ಅವರು ತಮ್ಮ ಸಹೋದರ ಪಂಕಜ್ ಮೋದಿ ಅವರ ನಿವಾಸಕ್ಕೆ ತೆರಳಿ, ತಾಯಿ ಹಿರಾ ಬಾ(94) ಅವರಿಂದ ಆಶೀರ್ವಾದ ಪಡೆದರು. ಈ ವೇಳೆ ಹಿರಾ ಬಾ ಅವರು ಮೋದಿಗೆ ಒಂದು ಪುಸ್ತಕ ಹಾಗೂ ಸ್ವಲ್ಪ ಹಣವನ್ನು ಕಾಣಿಕೆಯಾಗಿ ನೀಡಿದರು.
'ನಾನು ನನ್ನ ತಾಯಿಯ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ. ನನಗೆ ಇದಕ್ಕಿಂತ ದೊಡ್ಡ ಭಾಗ್ಯ ಬೇರೆ ಯಾವುದು ಇಲ್ಲ' ಎಂದು ಮೋದಿ ಹೇಳಿದ್ದಾರೆ.
ಪ್ರತಿಯೊಬ್ಬರು ನನಗೆ ಆಶೀರ್ವದಿಸಿದ್ದಾರೆ. ಜನರ ಪ್ರೀತಿ, ವಿಶ್ವಾಸ ನನಗೆ ಮತ್ತಷ್ಟು ಶಕ್ತಿ ನೀಡಿದೆ ಎಂದು ಮೋದಿ ತಿಳಿಸಿದ್ದಾರೆ.
64ನೇ ವಸಂತಕ್ಕೆ ಕಾಲಿಟ್ಟ ಮೋದಿಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹಾಗೂ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಸೇರಿದಂತೆ ಹಲವು ಗಣ್ಯರು ಶುಭಾಷಯ ಕೋರಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿಗಳ ಕಚೇರಿಯ ಮೂಲಗಳು ತಿಳಿಸಿವೆ.