ಪರಿಹಾರ ರದ್ದು: ಕೋರ್ಟ್ ಆದೇಶ ಪ್ರಶ್ನಿಸಲು ಮುಂದಾದ ಆಂಧ್ರ
2007ರ ಮೆಕ್ಕಾ ಮಸೀದಿ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಮುಸ್ಲಿಂ ಯುವಕರಿಗೆ ನೀಡಿರುವ ಪರಿಹಾರವನ್ನು...
ಹೈದರಾಬಾದ್: 2007ರ ಮೆಕ್ಕಾ ಮಸೀದಿ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಮುಸ್ಲಿಂ ಯುವಕರಿಗೆ ನೀಡಿರುವ ಪರಿಹಾರವನ್ನು ರದ್ದುಗೊಳಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ.
ಕೋರ್ಟ್ ನೀಡಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗುವುದು. ಅಲ್ಲದೆ ಅವಶ್ಯಕತೆ ಬಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಮಹಮದ್ ಆಲಿ ಶಬ್ಬಿರ್ ತಿಳಿಸಿದ್ದಾರೆ.
ಅಪರಾಧ ಪ್ರಕರಣದಲ್ಲಿ ಕೇವಲ ಖುಲಾಸೆಯಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ನ್ಯಾಯಾಧೀಶರಾದ ಕಲ್ಯಾಣ್ ಜ್ಯೋತಿ ಸೆಂಗುಪ್ತ ಅವರು ಪರಿಹಾರವನ್ನು ರದ್ದುಗೊಳಿಸಿದ್ದು, ಮುಸ್ಲಿಂ ಯುವಕರಿಗೆ ಈಗಾಗಲೇ ನೀಡಿರುವ ಮೊತ್ತವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಹೈಕೋರ್ಟ್ ಪರಿಹಾರ ರದ್ದುಗೊಳಿಸಿತ್ತು. ಈ ಸಂಬಂಧ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಕಿರಣ್‌ಕುಮಾರ್ ರೆಡ್ಡಿ, ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗುವುದು ಎಂದು ಶಬ್ಬಿರ್ ತಿಳಿಸಿದ್ದಾರೆ.
2007ರ ಸ್ಪೋಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 70 ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಸ್ಫೋಟದಲ್ಲಿ ಈ ಯುವಕರ ಕೈವಾಡ ಇಲ್ಲ ಎಂದು ತಿಳಿದಿದ್ದರಿಂದ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು.
ಈ ಸಂಬಂಧ ಯುವಕರಿಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಕೆಲ ಸಂಘಟನೆಗಳು ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದವು. ಅದರಂತೆ ಕಳೆದ ವರ್ಷ ಜನವರಿಯಲ್ಲಿ ರಾಜ್ಯ ಸರ್ಕಾರ ಪರಿಹಾರ ನೀಡಿತ್ತು. ಅವರಲ್ಲಿ 20 ಮಂದಿಗೆ ತಲಾ 3 ಲಕ್ಷ ರುಪಾಯಿ ಹಾಗೂ ಇನ್ನುಳಿದ 50 ಮಂದಿಗೆ ತಲಾ 20 ಸಾವಿರ ರುಪಾಯಿ ಪರಿಹಾರ ನೀಡಿತ್ತು.