ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ರಾಜ್ಯಗಳಿಗೆ ಕೇಂದ್ರ ಸೂಚನೆ
ಈರುಳ್ಳಿ ಪೂರೈಕೆ ಕಡಿಮೆ ಇರುವುದನ್ನೇ ಬಂಡವಾಳವಾಗಿಸಿಕೊಂಡು, ಕೃತಕವಾಗಿ ಈರುಳ್ಳಿ ಬೆಲೆ ಏರಿಸುತ್ತಿರುವ ದಲ್ಲಾಳಿಗಳು...
ನವದೆಹಲಿ: ಈರುಳ್ಳಿ ಪೂರೈಕೆ ಕಡಿಮೆ ಇರುವುದನ್ನೇ ಬಂಡವಾಳವಾಗಿಸಿಕೊಂಡು, ಕೃತಕವಾಗಿ ಈರುಳ್ಳಿ ಬೆಲೆ ಏರಿಸುತ್ತಿರುವ ದಲ್ಲಾಳಿಗಳು ಮತ್ತು ಸಗಟು ವ್ಯಾಪಾರಿಗಳು ಮೇಲೆ ಕ್ರಮಕೈಗೊಳ್ಳುವಂತೆ ಬುಧವಾರ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.
ಜುಲೈ ತಿಂಗಳಿಂದೀಚೆಗೆ ದೇಶದಲ್ಲಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಿಂದ ಪೂರೆಕೈ ಕುಸಿದಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಹೆಚ್ಚುತ್ತಿದೆ. ಇದರಿಂದಾಗಿ ರಾಜಧಾನಿ ದಿಲ್ಲಿಯಲ್ಲಿ ಈರುಳ್ಳಿ ಬೆಲೆ ಒಂದು ಕಿಲೋಗೆ 80 ರುಪಾಯಿಗೆ ಏರಿಕೆಯಾಗಿದೆ.
ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯ ಕೃತಕ ಏರಿಕೆ ಸೃಷ್ಟಿಸುವ ವ್ಯಾಪಾರಿಗಳು ಮತ್ತು ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಇಳಿಮುಖವಾಗುತ್ತದೆ ಎಂದು ಭಾವಿಸಿ, ಭವಿಷ್ಯದಲ್ಲಿ ಈರುಳ್ಳಿ ಕೊರತೆ ಕಾಣಿಸದಂತೆ ನೋಡಿಕೊಳ್ಳಲು ಗರಿಷ್ಠ ಪ್ರಮಾಣದಲ್ಲಿ ಈರುಳ್ಳಿಯನ್ನು ಶೇಖರಿಸಿ ಇಡಲಾಗುತ್ತಿರುವ ಮಹಾರಾಷ್ಟ್ರಕ್ಕೆ, ಅದನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಕೇಂದ್ರ ಸೂಚಿಸಿದೆ.
ಈರುಳ್ಳಿ ಪೂರೈಕೆಯಲ್ಲಿ ಅಡಚಣೆಗಳಿದ್ದರೆ ತಕ್ಷಣವೇ ಕೇಂದ್ರಕ್ಕೆ ಮಾಹಿತಿ ನೀಡುವಂತೆಯೂ ರಾಜ್ಯಗಳಿಗೆ ತಿಳಿಸಲಾಗಿದೆ. ಕಳೆದ ವರ್ಷದ ಇಳುವರಿಯಲ್ಲಿ ಸಂಗ್ರಹಿಸಿ ಇಡಲಾಗಿದ್ದ ಶೇ.90 ರಷ್ಟು ಬಳಕೆಯಾಗಿಬಿಟ್ಟಿದೆ. ಈಗ ಕೇವಲ 3ರಿಂದ 4 ಲಕ್ಷ ಟನ್ ಮಾತ್ರ ಮಾರಾಟಕ್ಕೆ ಉಳಿದಿರುವುದರಿಂದ ಇದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ ಎಂದು ಸಚಿವಾಲಯ ಹೇಳಿದೆ.