ವಿಲೀನ ಸಂದೇಶದೊಂದಿಗೆ 'ಯಡ್ಡಿ' ಆಪ್ತ ದೆಹಲಿಗೆ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾದ ಮೇಲೆ ಕರ್ನಾಟಕ ಜನತಾ ಪಕ್ಷ(ಕೆಜೆಪಿ) ...
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾದ ಮೇಲೆ ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮತ್ತೆ ಬಿಜೆಪಿ ಜೊತೆಗೆ ವಿಲೀನ ಮಾಡಿಕೊಳ್ಳಲು ಚಿಂತನೆ ನಡೆಸಿದ್ದಾರೆ ಎಂದು ಬುಧವಾರ ಪಕ್ಷದ ಮೂಲಗಳು ಹೇಳಿವೆ.
ಬಿಜೆಪಿ ಜೊತೆಗಿನ ವಿಲೀನಕ್ಕೆ ಮುಂದಾಗಿರುವ ಯಡಿಯೂರಪ್ಪ ಅವರು, ಈ ಸಂಬಂಧ ದಿಲ್ಲಿಯಲ್ಲಿ ಪಕ್ಷದ ಹಿರಿಯ ನಾಯಕರಾದ ಎಲ್.ಕೆ ಆಡ್ವಾಣಿ, ರಾಜನಾಥ್ ಸಿಂಗ್ ಹಾಗೂ ಅರುಣ್ ಜೇಟ್ಲಿ ಜತೆ ಮಾತುಕತೆ ನಡೆಸಲೆಂದು ತಮ್ಮ ಆಪ್ತರನ್ನು ದೆಹಲಿಗೆ ಕಳುಹಿಸಿದ್ದಾರೆ.
ಡಿನೋಟಿಫಿಕೇಷನ್ ಹಗರಣದಿಂದಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಿಜೆಪಿ ತೊರೆದು ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದ್ದ ಯಡಿಯೂರಪ್ಪ, ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಮತ್ತೆ ಬಿಜೆಪಿಗೆ ಮರಳಲು ಒಲವು ತೋರಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಆಪ್ತ ಹಾಗೂ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಅವರನ್ನು ದಿಲ್ಲಿಗೆ ಕಳುಹಿಸಿದ್ದಾರೆ.
ದೆಹಲಿಗೆ ತೆರಳಿರುವ ಲೆಹರ್ ಸಿಂಗ್ ಅವರು ಅರುಣ್ ಜೇಟ್ಲಿಯನ್ನು ಭೇಟಿ ಮಾಡಲಿದ್ದು, ಆಡ್ವಾಣಿ ಜತೆಗೂ ಭೇಟಿಗೆ ಸಮಯ ಕೇಳಿದ್ದಾರೆ. ಇಂದು ಸಂಜೆ ವೇಳೆ ಅವರು ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನೂ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏತನ್ಮಾಧ್ಯೆ, ಬಿಎಸ್‌ವೈ ಅವರು ಬೆಂಗಳೂರಿನಲ್ಲಿ ಕೆಜೆಪಿ ಕಾರ್ಯಕಾರಿ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಮೋದಿ ಆಯ್ಕೆಯನ್ನು ಬೆಂಬಲಿಸುವ ಹಾಗೂ ಬಿಜೆಪಿಯಲ್ಲಿ ಒಮ್ಮತವಿದ್ದರೇ ಅದರೊಂದಿಗೆ ಕೆಜೆಪಿ ಪಕ್ಷ ವಿಲೀನಕ್ಕೆ ಸಿದ್ಧ ಎಂಬ ನಿರ್ಣಯಗಳು ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಬಿಜೆಪಿಯ ದೆಹಲಿ ನಾಯಕರು ಹಾಗೂ ಕರ್ನಾಟಕ ಬಿಜೆಪಿ ಮುಖಂಡರ ನಡುವೆ ಒಮ್ಮತ ಮೂಡದೇ ಹೋದರೆ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಸೇರುವುದಿಲ್ಲ. ಆದರೆ ಲೋಕಸಭೆ ಚುನಾವಣೆಗಳು ಸಮೀಪಿಸಿದ್ದು, ಕೆಜೆಪಿಯಿಂದ ಬಿಜೆಪಿ ಲಾಭ ಪಡೆಯಲಿದೆ ಎಂದು ಕೆಜೆಪಿ ಮುಖಂಡರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.