ಸಂತೋಷ್ ಲಾಡ್ ರಾಜಿನಾಮೆಗೆ ಹಿರೇಮಠ್ ಆಗ್ರಹ
ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ ಲಾಡ್ ಅವರು ರಾಜಿನಾಮೆ ನೀಡಬೇಕು..
ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ ಲಾಡ್ ಅವರು ರಾಜಿನಾಮೆ ನೀಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಅವರು ಬುಧವಾರ ಆಗ್ರಹಿಸಿದ್ದಾರೆ.
ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಿರೇಮಠ್, ವಿ.ಎಸ್.ಲಾಡ್ ಆಂಡ್ ಸನ್ಸ್ ಕಂಪನಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದು, ಈ ಕಂಪನಿಯ ಪಾಲುದಾರರಾಗಿರುವ ಸಂತೋಷ್ ಲಾಡ್ ಅವರು ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಅಕ್ರಮ ಗಣಿಗಾರಿಕೆ ಕುರಿತು ನ್ಯಾ.ಸಂತೋಷ್ ಹೆಗ್ಡೆ ಅವರು ನೀಡಿದ್ದ ವರದಿಯಲ್ಲಿ ವಿ.ಎಸ್.ಲಾಡ್ ಆಂಡ್ ಸನ್ಸ್ ಕಂಪನಿಯ ಹೆಸರಿರುವ ಬಗ್ಗೆ ಹಿರೇಮಠ್ ಅವರು ದಾಖಲೆ ಬಿಡುಗಡೆ ಮಾಡಿದರು.
ಲೋಕಾಯುಕ್ತ ವರದಿಯ ಎರಡನೇ ಅಧ್ಯಾಯದಲ್ಲಿ ವಿ.ಎಸ್.ಲಾಡ್ ಆಂಡ್ ಕಂಪನಿಯ ಹೆಸರು ಉಲ್ಲೇಖವಾಗಿದೆ. ಅಲ್ಲದೆ ಲಾಡ್ ಕಂಪನಿಯ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಹೀಗಾಗಿ ಅವ್ಯವಹಾರದ ಕಂಪನಿಯ ಪಾಲುದಾರರಾಗಿರುವ ಸಂತೋಷ್ ಲಾಡ್ ಅವರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.