ಕಂಪ್ಲಿ ಶಾಸಕ ಸುರೇಶ್ ಬಾಬು ಸಿಬಿಐ ವಶಕ್ಕೆ
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಸುರೇಶ್ ಬಾಬು ಅವರನ್ನು ಸಿಬಿಐ ಅಧಿಕಾರಿಗಳು...
ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಸುರೇಶ್ ಬಾಬು ಅವರನ್ನು ಸಿಬಿಐ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ವಿದೇಶಗಳಿಗೆ ಅಕ್ರಮವಾಗಿ ಅದಿರು ರಫ್ತು ಮಾಡಿರುವ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಬಿಎಸ್‌ಆರ್ ಕಾಂಗ್ರೆಸ್ ಶಾಸಕ ಸುರೇಶ್ ಬಾಬು ಅವರನ್ನು ಇಂದು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಸುರೇಶ್ ಬಾಬು, ನಾಗೇಂದ್ರ, ಆನಂದ್‌ಸಿಂಗ್ ಹಾಗೂ ಸತೀಶ್ ಸೈಲ್ ಅವರ ಬಂಧನಕ್ಕೆ ಅನುಮತಿ ಕೋರಿ ಸಿಬಿಐ ಅಧಿಕಾರಿಗಳು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಪತ್ರ ಬರೆದಿದ್ದರು. ಆದರೆ ಶಾಸಕರು ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದರೆ ಮತ್ತು ಅಧಿವೇಶನ ನಡೆಯುತ್ತಿದ್ದರೆ ಮಾತ್ರ ನನ್ನ ಅನುಮತಿ ಪಡೆಯಬೇಕಾಗುತ್ತದೆ. ಇಲ್ಲದಿದ್ದೆರೆ ನನ್ನ ಅನುಮತಿಯ ಅಗತ್ಯ ಇಲ್ಲ ಎಂದು ಹೇಳುವ ಮೂಲಕ ಶಾಸಕರ ಬಂಧನಕ್ಕೆ ಹಸಿರು ನಿಶಾನೆ ತೋರಿದ್ದರು.
ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಇಂದು ಸುರೇಶ್ ಬಾಬು ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನುಳಿದಂತೆ ಆರೋಪ ಎದುರಿಸುತ್ತಿರುವ ಶಾಸಕರಾದ ನಾಗೇಂದ್ರ, ಆನಂದ್‌ಸಿಂಗ್ ಹಾಗೂ ಸತೀಶ್ ಸೈಲ್ ಈಗ ಬಂಧನದ ಭೀತಿ ಎದುರಿಸುತ್ತಿದ್ದಾರೆ.