ಕೆಪಿಎಸ್‌ಸಿ ಹಗರಣ: ಹೈಕೋರ್ಟ್‌ನಿಂದ ಸತ್ಯಶೋಧನ ಸಮಿತಿ ರಚನೆ
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ನೇಮಕಾತಿ ಹಗರಣ ಸಂಬಂಧ ಬುಧವಾರವಷ್ಟೆ..
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ನೇಮಕಾತಿ ಹಗರಣ ಸಂಬಂಧ ಬುಧವಾರವಷ್ಟೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್ ಇದೀಗ ಸ್ವತಃ ತಾನೇ ಹಗರಣಗಳ ಸತ್ಯಶೋಧನೆಗೆ ಮುಂದಾಗಿದೆ.
ಕೆಪಿಎಸ್‌ಸಿಯಿಂದ 1998, 1999 ಹಾಗೂ 2004ರಲ್ಲಿ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ಭರ್ತಿಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಶುಕ್ರವಾರ ಸತ್ಯಶೋಧನಾ ಸಮಿತಿ ರಚಿಸಿದ್ದು, ಈ ಬಗ್ಗೆ ಕೆಪಿಎಸ್‌ಸಿಯ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸಮಿತಿಗೆ ಸೂಚಿಸಿದೆ.
ಅಕ್ರಮವಾಗಿ ನೇಮಕಗೊಂಡಿರುವ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ಕನಿಷ್ಠ ಶೋಕಾಸ್ ನೋಟಿಸ್ ಜಾರಿ ಮಾಡಲೂ ನಿಮಗೆ ತಾಕತ್ತಿಲ್ಲವೇ ಎಂದು ಕಳೆದ ಬುಧವಾರ ಕೋರ್ಟ್ ಸರ್ಕಾರವನ್ನು ಪ್ರಶ್ನಿಸಿತ್ತು.
ನೇಮಕ ಪ್ರಕ್ರಿಯೆಯಲ್ಲಿ ಅಕ್ರಮವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸಿಐಡಿ ವರದಿ ನೀಡಿದ್ದರೂ, ಆರೋಪಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಒಂದೆಡೆ ಕೆಪಿಎಸ್‌ಸಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸುತ್ತಿದೆ. ಇನ್ನೊಂದೆಡೆ, ಸಿಐಡಿ ವರದಿ ಕೇವಲ ಮಾಹಿತಿಯಷ್ಟೇ ಎಂಬ ಉಡಾಫೆ ಧೋರಣೆ ತೋರುತ್ತಿದೆ. ಅಕ್ರಮವಾಗಿ ಹುದ್ದೆ ಗಳಿಸಿದವರನ್ನು ಪ್ರಶ್ನಿಸುವ ತಾಕತ್ತು ಸರ್ಕಾರಕ್ಕೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಮುಖ್ಯ ನ್ಯಾ.ಡಿ.ಎಚ್. ವಘೇಲ ಹಾಗೂ ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿತು.