ಬಾಟ್ಲಾ ಎನ್‌ಕೌಂಟರ್ ಪ್ರಕರಣ: ದೆಹಲಿ ಪೊಲೀಸರಿಗೆ ನೋಟೀಸ್
ನವದೆಹಲಿ: ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ಹೈಕೋರ್ಟ್ ಶುಕ್ರವಾರ ನೋಟೀಸ್ ಜಾರಿ ಮಾಡಿದೆ.
ಐದು ವರ್ಷಗಳ ಹಿಂದಿನ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದ ಅಪರಾಧಿ ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತ ಶಹಜಾದ್ ಅಹಮದ್‌ಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.
ತನ್ನನ್ನು ಅಪರಾಧಿ ಎಂದು ಪರಿಗಣಸಿದನ್ನು ಪ್ರಶ್ನಿಸಿ ಶಹಜಾದ್ ಅಹಮದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಮೂರ್ತಿ ಕೈಲಾಶ್ ಗಂಭೀರ್ ಮತ್ತು ಇಂದರ್‌ಮೀತ್ ಕೌರ್ ಅವರನ್ನೊಳಗೊಂಡ ದ್ವೀಭಾಗಿಯ ಪೀಠ ದೆಹಲಿ ಪೊಲೀಸರಿಗೆ ನೋಟೀಸ್ ಜಾರಿ ಮಾಡಿದೆ.
ಶಹಜಾದ್ ಅಹಮದ್ ನಾನು ಅಪರಾಧಿ ಅಲ್ಲ, ನನಗೆ ಜಾಮೀನು ನೀಡಿ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಮುಂದಿನ ವಿಚಾರಣೆಗೂ ಮುನ್ನ ನೋಟೀಸ್‌ಗೆ ಉತ್ತರಿಸುವಂತೆ ದೆಹಲಿ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಸಿ ಶರ್ಮಾ ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಶಹಜಾದ್ ವಿರುದ್ಧ ಇತರೆ ಪೊಲೀಸರ ಹತ್ಯೆ ಪ್ರಯತ್ನ, ಕರ್ತವ್ಯಕ್ಕೆ ಅಡ್ಡಿ, ಕ್ರಿಮಿನಲ್ ಸಂಚು, ಸಾಕ್ಷ್ಯ ನಾಶ ಮತ್ತು ಶಸ್ತ್ರಾಸ್ತ್ರಗಳ ಕಾಯ್ದೆಯಡಿಯೂ ತಪ್ಪಿತಸ್ಥ ಎಂದು ಘೋಷಿಸಿಲಾಗಿತ್ತು.
2008ರಲ್ಲಿ ನಡೆದ ಈ ಎನ್‌ಕೌಂಟರ್ ವೇಳೆ ದೆಹಲಿ ಪೊಲೀಸ್ ವಿಶೇಷ ಪಡೆಯ ಇನ್ಸ್‌ಪೆಕ್ಟರ್ ಎಂ. ಸಿ ಶರ್ಮಾ ಮೃತಪಟ್ಟಿದ್ದರು. ಶರ್ಮಾ ಉಗ್ರರ ಗುಂಡಿಗೆ ಬಲಿಯಾಗಿದ್ದರೇ ಅಥವಾ ಪೊಲೀಸರ ಗುಂಡು ತಗುಲಿ ಮೃತಪಟ್ಟಿದ್ದರೇ ಎನ್ನುವ ಕುರಿತು ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದವು.
ಆದರೆ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಜುಲೈ 25ರಂದು ಶಹಜಾದ್ ದೋಷಿ ಎಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು.