ಶಾಸಕ ಸುರೇಶ್ ಬಾಬು ಸೆ.27ರವರೆಗೆ ಸಿಬಿಐ ವಶಕ್ಕೆ
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿದ್ದ ಬಳ್ಳಾರಿ ಜಿಲ್ಲೆ ಕಂಪ್ಲಿ ಶಾಸಕ ಸುರೇಶ್ ಅವರನ್ನು..
ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿದ್ದ ಬಳ್ಳಾರಿ ಜಿಲ್ಲೆ ಕಂಪ್ಲಿ ಶಾಸಕ ಸುರೇಶ್ ಅವರನ್ನು ಸೆಪ್ಟೆಂಬರ್ 27ರವರೆಗೆ ಕೋರ್ಟ್ ಸಿಬಿಐ ವಶಕ್ಕೆ ಒಪ್ಪಿಸಿದೆ. ಇದರೊಂದಿಗೆ ಅಕ್ರಮ ಗಣಿಗಾರಿಕೆ ಸಂಬಂಧ ರೆಡ್ಡಿ ಸಹೋದರರ ಸಾಮ್ರಾಜ್ಯದ ಮತ್ತೊಬ್ಬ ವ್ಯಕ್ತಿ ಜೈಲು ಪಾಲಾದಂತಾಗಿದೆ.
ನಿನ್ನೆ ಬಿಎಸ್‌ಆರ್ ಕಾಂಗ್ರೆಸ್ ಶಾಸಕ ಸುರೇಶ್ ಬಾಬು ಅವರನ್ನು ಬಂಧಿಸಿದ್ದ ಸಿಬಿಐ ಅಧಿಕಾರಿಗಳು ಇಂದು, ಸಿಬಿಐ ವಿಶೇಷ ಕೋರ್ಟ್‌ಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಸೆ.27ರವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ.
ಕಳೆದ ಎರಡು ದಿನಗಳಿಂದ ಸುರೇಶ್ ಬಾಬು ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದ ಸಿಬಿಐ, ಗುರುವಾರ ಮಧ್ಯಾಹ್ನ ಅವರನ್ನು ಬಂಧಿಸಿತ್ತು. ನಂತರ ಸುರೇಶ್ ಬಾಬು ಅವರನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ನಡೆಯುತ್ತಿರುವ ತನಿಖೆಯ ಭಾಗವಾಗಿ ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಸಾಯಂಕಾಲ 5 ಗಂಟೆ ಸುಮಾರಿಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಕಚೇರಿ ಹಾಗೂ ಸಾಗರದಲ್ಲಿರುವ ಅವರ ನಿವಾಸಕ್ಕೆ ಫ್ಯಾಕ್ಸ್ ಮೂಲಕ ಮಾಹಿತಿ ನೀಡಿದರು.