ಶೃತಿ-ಚಂದ್ರಚೂಡ್ ವಿವಾಹ ರದ್ದು: ಕೋರ್ಟ್ ತೀರ್ಪು
ನಟಿ ಶೃತಿ ಹಾಗೂ ಪತ್ರಕರ್ತ ಚಂದ್ರಚೂಡ್ ಅವರ ಎರಡನೇ ಮದುವೆ ಮುರಿದು ಬಿದ್ದಿದ್ದು, ವಿವಾಹ ರದ್ದುಗೊಳಿಸಿ..
ಬೆಂಗಳೂರು: ನಟಿ ಶೃತಿ ಹಾಗೂ ಪತ್ರಕರ್ತ ಚಂದ್ರಚೂಡ್ ಅವರ ಎರಡನೇ ಮದುವೆ ಮುರಿದು ಬಿದ್ದಿದ್ದು, ವಿವಾಹ ರದ್ದುಗೊಳಿಸಿ ನಗರದ ಕೌಟುಂಬಿಕ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ಚಂದ್ರಚೂಡ್ ಅವರು ತಮ್ಮಿಂದ ವಿಚ್ಛೇದನ ಪಡೆಯದೇ ಶೃತಿ ಅವರೊಂದಿಗೆ ಎರಡನೇ ಮದುವೆಯಾಗಿದ್ದು, ಅವರ ವಿವಾಹವನ್ನು ರದ್ದುಗೊಳಿಸಬೇಕು ಎಂದು ಕೋರಿ ಚಂದ್ರಚೂಡರ ಮೊದಲ ಪತ್ನಿ ಮಂಜುಳಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಇಂದು ಅಂತಿಮ ತೀರ್ಪು ಪ್ರಕಟಿಸಿದೆ.
ವಿವಾಹ ರದ್ದತಿಗೆ ಸ್ವತಹ ಚಂದ್ರಚೂಡ್ ಹಾಗೂ ಶೃತಿ ಇಬ್ಬರೂ ಒಪ್ಪಿಗೆ ಸೂಚಿಸಿದ್ದರಿಂದ ಕೋರ್ಟ್ ವಿವಾಹವನ್ನು ರದ್ದುಗೊಳಿಸಿ ಆದೇಶಿಸಿದೆ.
ಮೊದಲನೆ ಪತಿ ನಿರ್ದೇಶಕ ಎಸ್.ಮಹೇಂದರ್ ಅವರಿಂದ ವಿಚ್ಛೇದನ ಪಡೆದಿದ್ದ ಶೃತಿ ಕಳೆದ ಜೂನ್ 6ರಂದು ಚಂದ್ರಚೂಡ್ ಅವರೊಂದಿಗೆ ಎರಡನೇ ಮದುವೆಯಾಗಿದ್ದರು. ಆದರೆ ಚಂದ್ರಚೂಡ್ ಅವರು ತಮ್ಮಿಂದ ವಿಚ್ಛೇದನ ಪಡೆಯದೇ ಎರಡನೇ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದ ಅವರ ಮೊದಲ ಪತ್ನಿ ಮಂಜೂಳಾ, ಅವರ ವಿವಾಹ ರದ್ದುಕೋರಿ ಅರ್ಜಿ ಸಲ್ಲಿಸಿದ್ದರು.
ನಾನು ನಿರಪರಾಧಿ, ಶೋಷಿತಳು: ಶೃತಿ
ನ್ಯಾಯಾಲಯ ತಮ್ಮ ವಿವಾಹವನ್ನು ರದ್ದುಗೊಳಿಸಿದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ನಟಿ ಶೃತಿ ಅವರು, ವಿವಾಹ ರದ್ದತಿಯಿಂದ ನೋವು ಕಡಿಮೆಯಾಗಿದೆ ಎಂದಿದ್ದಾರೆ.
ತಾವು ನಿರಪರಾಧಿ ಮತ್ತು ಶೋಷಿತಳು ಎಂದಿರುವ ಶೃತಿ, ನಾನು ಯಾವುದೇ ತಪ್ಪು ಮಾಡಿಲ್ಲ. ಯಾರೋ ಮಾಡಿದ ತಪ್ಪಿನಿಂದ ನನಗೆ ಅನ್ಯಾಯವಾಗಿದೆ. ಆದರೂ ನನ್ನಿಂದ ಯಾರಿಗೂ ಅನ್ಯಾಯವಾಗಬಾರದು ಎಂದು ನಾನು ವಿವಾಹ ರದ್ದತಿಗೆ ಒಪ್ಪಿಗೆ ಸೂಚಿಸಿದ್ದೆ ಎಂದು ತಿಳಿಸಿದ್ದಾರೆ.
ನಮ್ಮ ಜೀವನ ಸರಿಪಡಿಸಲು ಮತ್ತು ನಮ್ಮನ್ನು ಒಂದುಗೂಡಿಸಲು ಯಾರೂ ಬಯಸಲಿಲ್ಲ. ಆದರೆ ಎಲ್ಲಾ ಮುಗಿದ ಮೇಲೆ ಈಗ ಮಾತನಾಡಿ ಪ್ರಯೋಜನವಿಲ್ಲ ಎಂದು ಶೃತಿ ತಮ್ಮ ಅಳಲು ತೊಡಿಕೊಂಡಿದ್ದಾರೆ.
ನನ್ನಿಂದ ಶೃತಿಗೆ ಅನ್ಯಾಯವಾಗಿದೆ: ಚಂದ್ರಚೂಡ್
ಇನ್ನು ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪತ್ರಕರ್ತ ಚಂದ್ರಚೂಡ್, ನಮ್ಮಿಬ್ಬರ ವಿವಾಹ ರದ್ದಾಗಿದ್ದು ನನಗೆ ತುಂಬಾ ಬೇಸರವಾಗಿದೆ. ಅಲ್ಲದೆ ನನ್ನಿಂದ ಶೃತಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಶೃತಿ ಅವರನ್ನು ಕೋರ್ಟ್ ಮೆಟ್ಟಿಲೇರಿಸಿದ್ದೂ ನನಗೆ ಬೇಸರ ತಂದಿದೆ. ಮಂಜುಳಾ ಅವರು ದಾಖಲಿಸಿದ್ದ ಎಲ್ಲಾ ಪ್ರಕರಣಗಳಲ್ಲೂ ಶೃತಿ ಅವರು ಕೋರ್ಟ್‌ಗೆ ಹಾಜರಾಗಿದ್ದಾರೆ. ಅವರನ್ನು ನನ್ನ ಹೃದಯದಿಂದ ತೆಗೆಯಲು ಆಗಲ್ಲ ಎಂದಿದ್ದಾರೆ.