ಮುಜಾಫರ್‌ನಗರ ಗಲಭೆ: ಮತ್ತಿಬ್ಬರು ಶಾಸಕರ ಬಂಧನ
ಉತ್ತರ ಪ್ರದೇಶದ ಮುಜಾಫರ್‌ನಗರ ಕೋಮುಗಲಭೆಗೆ ಸಂಬಂಧಿಸಿದಂತೆ ಶನಿವಾರ ಉತ್ತರ ಪ್ರದೇಶ ಪೊಲೀಸರು..
ಮುಜಾಫರ್‌ನಗರ: ಉತ್ತರ ಪ್ರದೇಶದ ಮುಜಾಫರ್‌ನಗರ ಕೋಮುಗಲಭೆಗೆ ಸಂಬಂಧಿಸಿದಂತೆ ಶನಿವಾರ ಉತ್ತರ ಪ್ರದೇಶ ಪೊಲೀಸರು ಮತ್ತಿಬ್ಬರು ಶಾಸಕರನ್ನು ಬಂಧಿಸಿದ್ದಾರೆ.
ನಿನ್ನೆಯಷ್ಟೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಸುರೇಶ್ ರಾಣಾರನ್ನು ಬಂಧಿಸಿದ್ದ ಪೊಲೀಸರು ಇಂದು ಮತ್ತೊರ್ವ ಬಿಜೆಪಿ ಶಾಸಕ ಸಂಗೀತ್ ಸೋಮ್ ಹಾಗೂ ಬಿಎಸ್‌ಪಿ ಶಾಸಕ ನೂರ್‌ಸಲಿಂ ರಾಣಾ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ದ್ವೇಷಪೂರಿತ ಭಾಷಣ ಮಾಡಿ, ಜನರನ್ನು ಉದ್ರಿಕ್ತಗೊಳಿಸಿದ ಆರೋಪದ ಮೇಲೆ ಈ ಶಾಸಕರನ್ನು ಬಂಧಿಸಲಾಗಿದೆ. ಗಲಭೆ ಸಂಬಂಧ ಒಟ್ಟು 16 ಮಂದಿ ರಾಜಕೀಯ ನಾಯಕರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದ್ದು, ಈಗ ಮೂವರು ನಾಯಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಉಳಿದ ನಾಯಕರಿಗಾಗಿ ಬಲೆ ಬೀಸಿದ್ದಾರೆ.
ಸೋಮ್ ಅವರನ್ನು ಅವರ ವಿಧಾಸಭಾ ಕ್ಷೇತ್ರ ಸರ್ಧಾನದ ಸಾಲವ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಎಸ್‌ಎಸ್‌ಪಿ ದೀಪಕ್ ಕುಮಾರ್ ಅವರು ತಿಳಿಸಿದ್ದಾರೆ.