ಸ್ಪಾಟ್ ಫಿಕ್ಸಿಂಗ್: ಮೇಯಪ್ಪನ್ ವಿರುದ್ಧ ಚಾರ್ಜ್ಶೀಟ್
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು...
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಶನಿವಾರ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಇಂದು ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಚೈನ್ನೈ ಸೂಪರ್ ಕಿಂಗ್ಸ್ನ ಮುಖ್ಯಸ್ಥ ಗುರುನಾಥ್ ಮೇಯಪ್ಪನ್, ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಸೇರಿದಂತೆ 22 ಆರೋಪಿಗಳನ್ನು ಹೆಸರಿಸಲಾಗಿದೆ.
ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಅಳಿಯ ಗುರನಾಥ್ ಮೇಯಪ್ಪನ್ ಅವರ ಮೇಲೆ ಬೆಟ್ಟಿಂಗ್ ಮತ್ತು ವಂಚನೆ ಆರೋಪ ಮಾಡಲಾಗಿದೆ. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಮೇಯಪ್ಪನ್ಗೆ ಸಂಪರ್ಕವಿಲ್ಲ ಆದರೆ ಅವರು ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ.
ಪಾಕಿಸ್ತಾನದ ಅಂಪೈರ್ ಅಸಾದ್ ರೌಫ್ ಅವರನ್ನು ಚಾರ್ಜ್ಶೀಟ್ನಲ್ಲಿ ಹೆಸರಿಸಲಾಗಿದೆ ಹಾಗೂ ಹಗರಣ ಸಂಬಂಧ ಬಂಧನಕ್ಕೊಳಗಾಗಿದ್ದ ಅನೇಕರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 21ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.