ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೀನ್ಯಾ ರಕ್ತಪಾತ: 'ವೈಟ್ ವಿಡೋ' ಕೈವಾಡ ನಿರಾಕರಿಸಿದ ಅಲ್‌ಶಬಾಬ್

ಕೀನ್ಯಾ ರಾಜಧಾನಿ ನೈರೋಬಿಯ ವೆಸ್ಟ್‌ಗೇಟ್ ಶಾಪಿಂಗ್ ಮಾಲ್‌ವೊಂದರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ...

Rashmi Kasaragodu
Updated On : 23 Sept 2013, 4:34 am

ನೈರೋಬಿ: ಕೀನ್ಯಾ ರಾಜಧಾನಿ ನೈರೋಬಿಯ ವೆಸ್ಟ್‌ಗೇಟ್ ಶಾಪಿಂಗ್ ಮಾಲ್‌ವೊಂದರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 69ಕ್ಕೇರಿದೆ. ಅದೇ ವೇಳೆ 63 ಜನರು ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ವ್ಯಕ್ತಿಗಳನ್ನು ಉಗ್ರರು ಒತ್ತೆಯಾಳುಗಳನ್ನಾಗಿರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನೈರೋಬಿಯ ಪ್ರಮುಖ ಮಾಲ್‌ಗಳಲ್ಲಿ ಒಂದಾಗಿರುವ ವೆಸ್ಟ್‌ಗೇಟ್‌ಗೆ ಶನಿವಾರ ರಾತ್ರಿ ನುಗ್ಗಿದ 10ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಉಗ್ರರು ಮುಸ್ಲಿಮೇತರರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಿದ್ದಾರೆ. ಪ್ರಸ್ತುತ ದಾಳಿಯಲ್ಲಿ ನಾಲ್ವರು ಭಾರತೀಯರು ಬಲಿಯಾಗಿದ್ದಾರೆ.
 
ಮಾಲ್ ಮೇಲೆ ದಾಳಿ ನಡೆಸಿದ ಉಗ್ರರು ಮೂರನೇ ದಿನವಾದ ಸೋಮವಾರ ಇನ್ನಷ್ಟು ಒತ್ತೆಯಾಳುಗಳನ್ನು ಹತ್ಯೆಗೈದಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಸೋಮವಾರ ಮಾಲ್ ಒಳಗೆ ಸೈನಿಕರು ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಕಾದಾಟ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ಕೀನ್ಯಾ ಸೇನೆ ಮಾಲ್‌ನ್ನು ಸುತ್ತುವರಿದಿದ್ದು, ಅಲ್‌ಖೈದಾ ಸಂಘಟನೆಯ ನಂಟು ಹೊಂದಿರುವ ಶಬಾಬ್ ಉಗ್ರರನ್ನು ಮಟ್ಟ ಹಾಕಲು ಹರಸಹಾಸ ಪಡುತ್ತಿದೆ.

ಒತ್ತೆಯಾಳುಗಳನ್ನು ಜೀವಂತವಾಗಿ ರಕ್ಷಿಸಲು ತಾವು ಪ್ರಯತ್ನಿಸುತ್ತಿದ್ದು, ಆದ್ದರಿಂದಲೇ ಉಗ್ರರ ಮೇಲೆ ತೀಕ್ಷ್ಣ ದಾಳಿ ನಡೆಸಲು ನಾವು ನಿಧಾನಿಸುತ್ತಿದ್ದೇವೆ ಎಂದು ಕೀನ್ಯಾ ರಕ್ಷಣಾ ಪಡೆ ಹೇಳಿಕೆ ನೀಡಿದೆ.

ವೈಟ್ ವಿಡೋ ಕೈವಾಡವಿಲ್ಲ: ಶಬಾಬ್

ಮಾಲ್‌ನಲ್ಲಿ ನಡೆದ ದಾಳಿಯಲ್ಲಿ ವೈಟ್ ವಿಡೋ ಅಥವಾ ಇನ್ಯಾವುದೇ ಮಹಿಳೆಯ ಕೈವಾಡವಿಲ್ಲ ಎಂದು ಅಲ್ ಶಬಾಬ್ ಸಂಘಟನೆಯ ಮಿಲಿಟರಿ ಕಮಾಂಡರ್ ಅಬು ಓಮರ್ ಹೇಳಿದ್ದಾರೆ. ಬಿಬಿಸಿ ರೇಡಿಯೋದಲ್ಲಿ ಮಾತನಾಡಿದ ಓಮರ್, ಈ ದಾಳಿಯಲ್ಲಿ ಬ್ರಿಟನ್ ಅಥವಾ ಅಮೆರಿಕನ್ನರ ಕೈವಾಡವಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ಮಾತ್ರವಲ್ಲದೆ ಇಂಥಾ ಕೃತ್ಯಗಳನ್ನೆಸಗಲು ನಾವು ನಮ್ಮ ಸಹೋದರಿಯರನ್ನು ಬಳಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇವೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement