ಕಾಶ್ಮೀರ ಸಚಿವರು ಲಂಚ ಪಡೆದಿಲ್ಲ: ವಿ.ಕೆ. ಸಿಂಗ್
ಜಮ್ಮು ಮತ್ತು ಕಾಶ್ಮೀರ ಸಚಿವರು ಸೇನೆಯಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ವಿವಾದಕ್ಕೀಡಾಗಿದ್ದ, ಜನರಲ್ ವಿ.ಕೆ. ಸಿಂಗ್...
ಗುರಗಾಂವ್: ಜಮ್ಮು ಮತ್ತು ಕಾಶ್ಮೀರ ಸಚಿವರು ಸೇನೆಯಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ವಿವಾದಕ್ಕೀಡಾಗಿದ್ದ, ಜನರಲ್ ವಿ.ಕೆ. ಸಿಂಗ್ ಅವರು ಮಂಗಳುವಾರ ಉಲ್ಟಾ ಹೊಡೆದಿದ್ದು, ಸಚಿವರು ತಮ್ಮ ವೈಯಕ್ತಿಯ ಲಾಭಕ್ಕಾಗಿ ಹಣ ಪಡೆದಿಲ್ಲ ಎಂದು ಹೇಳುವ ಮೂಲಕ ಆರೋಪದಿಂದ ಹಿಂದೆ ಸರಿದಿದ್ದಾರೆ.
ಗುರಗಾಂವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಸಚಿವರು ಲಂಚ ಪಡೆದಿಲ್ಲ ಎಂದು ಹೇಳಿದ್ದಾರೆ. ಜಮ್ಮುವಿನಲ್ಲಿ ಅಸ್ಥಿರತೆಯನ್ನು ಹೋಗಲಾಡಿಸಲು ಸಚಿವರು ಹಣ ಪಡೆದ್ದಿದ್ದಾರೆ ಹೊರತು ತಮ್ಮ ವೈಯಕ್ತಿಕ ಉಪಯೋಗಕ್ಕಾಗಿ ಅಲ್ಲ. ಹೀಗಾಗಿ ಸಚಿವರು ಸೇನೆಯಿಂದ ಲಂಚ ಪಡೆದಿದ್ದಾರೆ ಎಂದರೆ ತಪ್ಪಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸೇನೆಯಿಂದ ಸಚಿವರು ಹಣ ಪಡೆದಿದ್ದು, ಅದು ನಾಗರಿಕರ ಮನಸ್ಸು ಗೆಲ್ಲುವುದಕ್ಕೆ ಬಳಕೆ ಮಾಡಿದ್ದಾರೆ ಹೊರತು ತಮ್ಮ ಖಾಸಗಿ ಬದುಕಿಗಾಗಿ ದುರ್ಬಳಕೆ ಮಾಡಿಲ್ಲ. ಹೀಗಾಗಿ ಸಚಿವರು ಲಂಚ ಪಡೆದಿಲ್ಲ. ಜಮ್ಮುವಿನ ಒಳಿತಿಗಾಗಿ ಈ ಹಣ ಬಳಕೆಯಾಗಿದೆ ಎಂದು ತಿಳಿಸಿದ್ದಾರೆ.
ಬೇಹುಗಾರಿಕಾ ಘಟಕದ ಮೂಲಕ ಹಿರಿಯ ಸೇನಾಧಿಕಾರಿಗಳ ಫೋನ್ ಕದ್ದಾಲಿಕೆ ಹಾಗೂ ಸೇನೆಯ ರಹಸ್ಯ ನಿಧಿ ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ದೇಶದ ರಕ್ಷಣೆಗಾಗಿ ರಹಸ್ಯ ದಳ ರಚಿಸಿದ್ದೆ, ಆದರೆ ಅದು ನನ್ನ ಖಾಸಗಿ ಸೇನೆಯಾಗಿರಲಿಲ್ಲ ಎಂದಿದ್ದಾರೆ.
ಜಮ್ಮು ಕಾಶ್ಮೀರದ ಸಚಿವರು ಸೇನೆಯಿಂದ ಹಣ ಪಡೆದಿದ್ದಾರೆ ಎಂದು ವಿ.ಕೆ. ಸಿಂಗ್ ಆರೋಪಿಸಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ತಮ್ಮಿಂದ ಯಾವ ಸಚಿವರು ಹಣ ಪಡೆದಿದ್ದಾರೆ ಎಂಬುದನ್ನು ಬಹಿರಂಗಪಡಿಸುವಂತೆ ಸೇನೆ ಆಗ್ರಹಿಸಿತ್ತು. ಆದರೆ ಇಂದು ವಿ.ಕೆ. ಸಿಂಗ್ ಅವರು ಸಚಿವರು ಲಂಚ ಪಡೆದಿಲ್ಲ ಎಂದು ಹೇಳುವ ಮೂಲಕ ಆರೋಪದಿಂದ ನೂಣುಚಿಕೊಂಡಿದ್ದಾರೆ.